Latest

ಸ್ಮಾರ್ಟ್ ಸಿಟಿಗೆ ಎಲ್ಲಕಡೆ ಪ್ರತ್ಯೇಕ ಅಧಿಕಾರಿ -ಖಾದರ್


     ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸ್ಮಾರ್ಟ್‌ಸಿಟಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು ಈ ಸಮಿತಿಗಳು ಪ್ರತಿ ತಿಂಗಳೂ ಸಭೆ ಸೇರಿ ಕಾಮಗಾರಿಗಳನ್ನು ಪರಿಶೀಲಿಸುತ್ತಿವೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು. ಟಿ. ಖಾದರ್ ತಿಳಿಸಿದರು.
ವಿಧಾನಸಭೆಯಲ್ಲಿ ಬುಧವಾರ ಬಿಜೆಪಿಯ ಕೆ. ಎಸ್. ಈಶ್ವರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಏಳು ಮಹಾನಗರಗಳಲ್ಲಿ ಸ್ಮಾರ್ಟ್‌ಸಿಟಿ ಅಭಿಯಾನದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಆಯಾ ಭಾಗದಲ್ಲಿ ಸ್ಮಾರ್ಟ್‌ಸಿಟಿ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗಳು ಪ್ರತಿ ತಿಂಗಳೂ ಸಭೆ ಸೇರಿ ಕಾಮಗಾರಿಗಳನ್ನು ಪರಿಶೀಲಿಸುತ್ತಿವೆ. ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ಹಾಗೂ ಬೆಂಗಳೂರು ಮಹಾನಗರ ಈ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದ್ದು ಈ ಎಲ್ಲಾ ನಗರಗಳಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು 886 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 886 ಕೋಟಿ ರೂ. ಸೇರಿದಂತೆ ಒಟ್ಟು 1772 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಮಾರ್ಟ್‌ಸಿಟಿ ಅಭಿಯಾನದ ಮಾರ್ಗಸೂಚಿಯಂತೆ ಯೋಜನೆಯ ಅನುಷ್ಠಾನಕ್ಕಾಗಿ ಆಯ್ಕೆಯಾದ ನಗರಗಳಲ್ಲಿ ಸ್ವಾಯತ್ತತೆ ಹೊಂದಿರುವ ವಿಶೇಷ ಉದ್ದೇಶಿತ ವಾಹಕಗಳನ್ನು ಸ್ಥಾಪಿಸಲಾಗಿದ್ದು ಹೆಚ್ಚಿನ ಅವಕಾಶಗಳು ಸಂದಿವೆ. ಅಲ್ಲದೆ, ಏಳೂ ನಗರಗಳಲ್ಲಿ ಯೋಜನೆ ಸಮಾಲೋಚಕರನ್ನು ನೇಮಿಸಲಾಗಿದ್ದು ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಶಿವಮೊಗ್ಗ ಮಹಾನಗರ ಹೊರತುಪಡಿಸಿ ಉಳಿದ ಎಲ್ಲಾ ನಗರಗಳಲ್ಲಿ ಸ್ಮಾರ್ಟ್‌ಸಿಟಿಗೆ ಪ್ರತ್ಯೇಕವಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ನಿಯೋಜಿಸಲಾಗಿದೆ. ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ನೀಡಲಾಗಿದ್ದು ಸಧ್ಯದಲ್ಲಿಯೇ ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button