Latest

ಹಿಂದೂಗಳ ಮೇಲೆ ಕಾಂಗ್ರೆಸ್ ನಾಯಕರು ವಿಶ್ವಾಸ ಕಳೆದುಕೊಂಡಿದ್ದಾರೆ -ಶೆಟ್ಟರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನಗರದ ಸಮಾದೇವಿ ಗಲ್ಲಿಯಿಂದ ಬೃಹತ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮೊದಲಾದವರು ಸಾಥ್ ನೀಡಿದರು.  ಜಗದೀಶ ಶೆಟ್ಟರ ಮಾತನಾಡಿ, ಅಮೇಥಿಯಲ್ಲಿ ಸೋಲಿನ ಭೀತಿ ಕಾಡುತ್ತಿರುವುದರಿಂದ ಕೇರಳದ ವಯನಾಡು ಕ್ಷೇತ್ರವನ್ನು ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡಿದ್ದಾರೆ. ಶೇ.60 ಮತದಾರರು ಮುಸ್ಲಿಂ ಮತ್ತು ಕೈಸ್ತರು ಇದ್ದಾರೆ. ಆದ್ದರಿಂದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಿಂದೂಗಳ ಮೇಲೆ ಕಾಂಗ್ರೆಸ್ ನಾಯಕರು ವಿಶ್ವಾಸ ಕಳೆದುಕೊಂಡಿದ್ದಾರೆ. ಘಟಬಂಧನದಲ್ಲಿ ಕಾಂಗ್ರೆಸ್ ಪಕ್ಷವನ್ನು ಇತರೆ ಪಕ್ಷದವರು ಪರಿಗಣಿಸಿಲ್ಲ ಎಂದರು.ಜೆಡಿಎಸ್ ಪಕ್ಷ ಮೊದಲು ಅಪ್ಪ ಮಕ್ಕಳ ಪಕ್ಷವಾಗಿತ್ತು. ಈಗ ಅಪ್ಪ , ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರ ಪಕ್ಷವಾಗಿದೆ. ಜೆಡಿಎಸ್ ಕಾರ್ಯಕರ್ತರಿಗೆ ಪಕ್ಷದ ಮೇಲೆ ನಂಬಿಕೆ ಇಲ್ಲ. ತುಮಕೂರು ಲೋಕಸಭಾ ಕ್ಣೇತ್ರದಿಂದ ಸ್ಪರ್ಧೆ ಮಾಡಿರುವುದರಿಂದ ದೇವೇಗೌಡರು ಮನೆಗೆ ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲುವುದು ಸಾಧ್ಯವಿಲ್ಲ ಎಂದರು.

ಉತ್ತರ ಕರ್ನಾಟಕದಲ್ಲಿ ಎಲ್ಲೂ ಕಾಂಗ್ರೆಸ್ ಬರಲ್ಲ -ಕೋರೆ

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ರಾಹುಲ ಗಾಂಧಿ ಸೇರಿದಂತೆ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಿನ ಭಯದಲ್ಲಿದ್ದಾರೆ. ಅನೇಕ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ. ಪ್ರಧಾನಿ ಮೋದಿ ಅಲೆಗೆ ದೇಶದಲ್ಲಿ ಕಾಂಗ್ರೆಸ್ ದೂಳಿಪಾಟವಾಗಲಿದೆ ಎಂದರು.

ರಾಜ್ಯದ 20 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಗೆಲವು ಸಾಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ಹುಟ್ಟಿಕೊಂಡಿರುವ ಮಹಾಘಟ್ ಬಂಧನ ಒಕ್ಕೂಟವು ಚುನಾವಣೆ ಮೊದಲೇ ಹರಿದು ಹಂಚಿ ಹೋಗುತ್ತಿವೆ. ಈಗಾಗಲೇ ರಾಹುಲ್ ಗಾಂಧಿ ಬಚ್ಚಾ, ಅಮುಲ್ ಬೇಬಿ ಎಂದು ಪಶ್ಚಿಮ ಬಂಗಾಳ, ಕೇರಳದ ರಾಜ್ಯದ ಮುಖ್ಯಮಂತ್ರಿಗಳು ವ್ಯಂಗ್ಯ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರು ಈಗ ದೇವಸ್ಥಾನಗಳು ನೆನಪಾಗುತ್ತಿವೆ. ಮತಕ್ಕಾಗಿ ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ಆದರೆ, ಹಿಂದುಳಿದವರನ್ನು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದೆ. ಧಾರವಾಡ, ಬೆಳಗಾವಿ, ಕಲಬುರ್ಗಿ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ಬಿಜೆಪಿ ಮುಖಂಡರಾದ ಎಂ.ಬಿ.ಝಿರಲಿ, ಆರ್.ಎಸ್. ಮುತ್ತಾಲಿಕ ದೇಸಾಯಿ, ರಾಜೇಂದ್ರ ಹರಕುಣಿ, ಈರಣ್ಣ ಕಡಾಡಿ, ಕಿರಣ ಜಾಧವ, ಡಾ.ಸೋನಾಲಿ ಸರ್ನೋಬತ್ ಮೊದಲಾದವರು ಉಪಸ್ಥಿತರಿದ್ದರು.

ಸುರೇಶ ಅಂಗಡಿ ನಾಮಪತ್ರ ಸಲ್ಲಿಸಲು ಅದ್ಧೂರಿ ರ್ಯಾಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button