ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಡಾ. ಬಿ. ಆರ್. ಅಂಬೇಡ್ಕರ್ ಭಾರತದ ಪುನರುಜ್ಜೀವನದ ಹರಿಕಾರ ಎಂದು ಪ್ರೊ. ಅಭಿನವ ಪ್ರಕಾಶ ಸಿಂಗ್ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಳಗಾವಿ ವತಿಯಿಂದ ನಗರದ ಕೆಎಲ್ಇ ಜೀರಿಗೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್‌ರವರ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಡಾ. ಬಿ. ಆರ್. ಅಂಬೇಡ್ಕರ್ ಭಾರತದ ಕಟ್ಟಕಡೆಯ ವ್ಯಕ್ತಿಯನ್ನು ಈ ಸಮಾಜಕ್ಕೆ ಗುರುತಿಸಿ ಅವನನ್ನು ಎಲ್ಲರಲ್ಲೂ ಒಬ್ಬನನ್ನಾಗಿ ಮಾಡಿದರು. ಸ್ವತಃ ತಾವು ಕಡುಬಡತನದ ಕುಟುಂಬದಿಂದ ಬಂದಿದ್ದರೂ ತಮ್ಮ ಶಿಕ್ಷಣದ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನು ಉಂಟು ಮಾಡಿದವರು. ಇಂದು ಅಂಬೇಡ್ಕರ್ ಅಂದಾಕ್ಷಣ ನಮ್ಮ ನೆನಪಿಗೆ ಬರುವುದು ಸಂವಿಧಾನ ಮಾತ್ರ. ಅದನ್ನು ಹೊರತುಪಡಿಸಿ ಅಂಬೇಡ್ಕರ್‌ರವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಬಾಬಾಸಾಹೇಬರ ಅರ್ಥಶಾಸ್ತ್ರದಲ್ಲಿನ ಜ್ಞಾನ ಅತೀವವಾಗಿತ್ತುಎಂದು ಅವರು ಹೇಳಿದರು.
ವರ್ತಮಾನದಲ್ಲಿ ಕೆಲವೊಂದಿಷ್ಟು ಜನ ಬಾಬಾಸಾಹೇಬರನ್ನ ಒಂದು ಜಾತಿಗೆ ಸೀಮಿತ ಮಾಡಿದ್ದಾರೆ. ಅವರು ಈ ದೇಶದ ಮಾಣಿಕ್ಯ, ವಿಶ್ವರತ್ನ. ಈ ದೇಶದ ಪ್ರತಿ ಸಮುದಾಯಗಳ ಏಳಿಗೆಗೂ ಅವರ ಕೊಡುಗೆ ಗಣನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಗಜಂಪಿ ಉದ್ಯೋಗ ಸಮೂಹದ ಮಾಲೀಕರಾದ ಮಲ್ಲಿಕಾರ್ಜುನ ಜಗಜಂಪಿ, ಇಂದಿನ ಯುವಜನತೆ ಅಂಬೇಡ್ಕರ್‌ರವರ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಅವರ ಕಷ್ಟದ ಜೀವನ ಎಲ್ಲರಿಗೂ ಮಾದರಿ ಮತ್ತು ಸ್ಪೂರ್ತಿದಾಯಕವಾಗುತ್ತದೆ. ವಿದ್ಯಾರ್ಥಿಗಳು ವರ್ತಮಾನದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮುಂದಿನ ದಿನಗಳಲ್ಲಿ ನಮ್ಮನ್ನು ನಾವು ಸೇವಾ ಕಾರ್ಯ, ದೇಶ ಸೇವೆ ಮತ್ತು ದೀನದಲಿತರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ತೇಜಪ್ರತಿಬಿಂಬ ಕೇಸರಿಮಠದ ಪೂಜ್ಯ ಹರಿಗುರು ಮಹಾರಾಜ ಸ್ವಾಮಿಗಳು ವಿದ್ಯಾರ್ಥಿಗಳಿಗೆ ಮತ್ತು ಆಗಮಿಸಿದ ಪ್ರತಿನಿಧಿಗಳಿಗೆ ಹಿತವಚನವನ್ನು ನುಡಿದರು.
ಎಬಿಬಿಪಿ ರಾಜ್ಯ ಉಪಾಧ್ಯಕ್ಷ ಡಾ. ಅನಂದ ಹೊಸೂರ ಪ್ರಾಸ್ತಾವಿಕ ಭಾಷಣ ಮಾಡಿದರು. ಗಿರೀಶ ಬಡಿಗೇರ ಸ್ವಾಗತಿಸಿದರು. ರೋಹಿತ ಉಮನಾಬಾದಿಮಠ ವಂದಿಸಿದರು. ಪೃಥ್ವಿಕುಮಾರ, ಪ್ರೊ. ಶಿವರಾಜ ದಂಡಗಿ, ಡಾ. ಎಚ್. ಎಮ್. ಚನ್ನಪ್ಪಗೋಳ, ಸಚಿನ ಹಿರೇಮಠ, ಅಭಿಷೇಕ ಕಲಾಲ, ಸಂತೋಷ ಪಾಟೀಲ, ವಿದ್ಯಾ ಪಾಟೀಲ, ಸೌಮ್ಯಾ ಪಾಟೀಲ, ಆಕಾಶ ಮರೆಗುದ್ದಿ ಮತ್ತು ವಿವಿಧ ವಿದ್ಯಾಲಯದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ