Latest

ಅಧಿವೇಶನದ ವೇಳೆ ಹೋರಾಟಕ್ಕೆ ಉಕ ವಿಕಾಸ ವೇದಿಕೆ ಚಿಂತನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸುವರ್ಣ ವಿಧಾನಸೌಧವನ್ನು ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು ಎಂಬ ಬೇಡಿಕೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನತೆಯ ಇತರ ಬೇಡಿಕೆಗಳಿಗೆ ಸರಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ಸ್ಪಂಧಿಸದಿದ್ದರೆ ಹೋರಾಟದ ದಿಸೆಯನ್ನೆ ಬದಲಾಯಿಸಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡ ಅಶೋಕ ಪೂಜಾರಿ, ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಿದಾಗ ಬೇಡಿಕೆಗಳಿಗೆ ಸ್ಪಂಧಿಸುವ ಮಾತನಾಡುವ ರಾಜ್ಯ ಸರಕಾರ ಮತ್ತು ವಿರೋಧ ಪಕ್ಷಗಳು, ಹೋರಾಟದ ನಂತರದ ದಿನಗಳಲ್ಲಿ ಯಾವುದೇ ಪೂರಕವಾದ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಜುಲೈ ತಿಂಗಳಲ್ಲಿ ಸುವರ್ಣ ವಿಧಾನಸೌಧದ ಮುಂದೆ ನೂರಾರು ಮಠಾಧೀಶರ ನೇತೃತ್ವದಲ್ಲಿ ಪಕ್ಷಾತೀತ ಧರಣಿ ನಡೆಸಿದಾಗ ವಿರೋಧ ಪಕ್ಷದ ನಾಯಕರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಪೂರಕ ಸ್ಪಂಧನೆ ನೀಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲ ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವದು. ಕಚೇರಿಗಳನ್ನು ಗುರುತಿಸಲು ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದರು. ಈಗ ಮೂರು ತಿಂಗಳಾದರೂ ಯಾವುದೆ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೂ ಮುನ್ನ ರಾಜ್ಯ ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದರೆ, ಅಧಿವೇಶನದ ವೇಳೆ ಹೋರಾಟದ ರೂಪುರೇಷಗಳ ಬಗ್ಗೆ ಚರ್ಚಿಸಲು ಡಿಸೆಂಬರ 5 ರೊಳಗಾಗಿ ಮಠಾಧೀಶರ ನೇತೃತ್ವದಲ್ಲಿ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಸರಕಾರ ಪೂರಕ ಕ್ರಮ ಜರುಗಿಸದಿದ್ದರೆ ಮತ್ತು ಈ ಭಾಗದ ಜನಪ್ರತಿನಿಧಿಗಳು ಸದನದಲ್ಲಿ ಗಮನ ಸೆಳೆಯದಿದ್ದರೆ, ಹೋರಾಟವನ್ನು ರಾಜಕೀಯ ಹೋರಾಟವನ್ನಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರ್.ಎಸ್.ದರ್ಗೆ, ಪ್ರವೀಣ ಪಾಟೀಲ, ಎಂ.ಟಿ.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button