ಹಾಗೇ ಸುಮ್ಮನೆ…
ಸುಮನ್ ಸುಬ್ಬರಾವ್
ಮಂದಾರ ಬಿ ಎಸ್ ಸಿ ದ್ವಿತೀಯ ವರ್ಷದಲ್ಲಿ ಓದುತ್ತಿರುವ ಹುಡುಗಿ. ಓದಿನಲ್ಲಿ ತುಂಬಾ ಚುರುಕಾಗಿರುವುದರಿಂದ ಎಲ್ಲ ಪ್ರಾಧ್ಯಾಪಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಸುಶ್ರಾವ್ಯವಾಗಿ ಹಾಡುವುದರಿಂದ ಎಲ್ಲ ಕಾರ್ಯಕ್ರಮಗಳಲ್ಲೂ ಮೊದಲ ಪ್ರಾರ್ಥನೆ ಇವಳಿಂದಲೇ. ಹಾಗೆಯೇ ಸೌಂದರ್ಯದ ಖನಿಯಂತಿದ್ದ ಮಂದಾರ ಎಲ್ಲ ಹುಡುಗರ ಕನಸಿನ ಕನ್ಯೆಯಾಗಿದ್ದಳು. ಆದರೆ ಅವಳು ಮಾತ್ರ ಯಾವ ಹುಡುಗರನ್ನೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ.
ಚಿಕ್ಕಮಗುವಾಗಿದ್ದಾಗಲೇ ತಾಯಿ ತೀರಿ ಹೋಗಿದ್ದರಿಂದ ತಂದೆ ಮರುವಿವಾಹವಾಗಿದ್ದರು. ಮಲತಾಯಿ ಕೊಡುತ್ತಿದ್ದ ಹಿಂಸೆಯನ್ನು ನೋಡಿ ಅಜ್ಜಿ ಮತ್ತು ಸೋದರ ಮಾವ ತಮ್ಮ ಮನೆಗೆ ಕರೆದುಕೊಂಡು ಬಂದು ಬೆಳೆಸಿದರು.
ಅಜ್ಜಿ ಹೇಳುತ್ತಿದ್ದ ರಾಜಕುಮಾರನ ಕಥೆಗಳನ್ನು ಕೇಳಿ ಬೆಳೆದಿದ್ದ ಮಂದಾರ ತಿಳಿವಳಿಕೆ ಬರುತ್ತಿದ್ದ ಹಾಗೆ ತನ್ನ ರಾಜಕುಮಾರ ಹೇಗಿರಬಹುದು? ಹೇಗೆ ಬಂದು ತನ್ನನ್ನು ಕರೆದುಕೊಂಡು ಹೋಗಬಹುದು? ಎಂದು ಕನಸು ಕಾಣುತ್ತಿದ್ದಳು.
ಕಾಲೇಜಿಗೆ ಹೊಸದಾಗಿ ಸೇರಿದ್ದ ಉಪನ್ಯಾಸಕ ರವಿ ಇವಳ ಚುರುಕು ಬುದ್ದಿ, ಅಭ್ಯಾಸದೆಡೆಗಿನ ಆಸಕ್ತಿಯನ್ನು ಗಮನಿಸಿ ವಿಶೇಷ ಗಮನ ಹರಿಸಿ ಕಲಿಸತೊಡಗಿದನು. ದಿನಕಳೆದಂತೆ… ಮದುವೆಯಾದರೆ ಈ ಹುಡುಗಿಯನ್ನು ಮಾತ್ರ ಎಂದು ತೀರ್ಮಾನಿಸಿ ಒಂದು ದಿನ ಮಂದಾರಳಲ್ಲಿ ಪ್ರಸ್ತಾಪಿಸಿದ. ಗಲಿಬಿಲಿಗೊಂಡು ನಾಚಿ ನೀರಾದ ಮಂದಾರ ಅಜ್ಜಿಯಲ್ಲಿ ಕೇಳಿ ಎಂದು ತಪ್ಪಿಸಿಕೊಂಡಳು. ಆದರೂ ಮನದಲ್ಲಿ ಮಾತ್ರ ರವಿಯ ಮುಖವೇ ತುಂಬಿತ್ತು.
ಇವನೇ ತನ್ನ ರಾಜಕುಮಾರ ಎಂದು ಕಲ್ಪಿಸಿಕೊಳ್ಳುತ್ತಿದ್ದಳು.
ಪರೀಕ್ಷೆ ಹತ್ತಿರ ಬರುತ್ತಿದ್ದುದರಿಂದ ಇದನ್ನೆಲ್ಲ ಮರೆತು ಚೆನ್ನಾಗಿ ಓದುತ್ತಿದ್ದಳು. ಸಂಬಂಧಿಕರು ಯಾರೋ ತೀರಿಕೊಂಡಿದ್ದರಿಂದ ಅಜ್ಜಿ ಮತ್ತು ಅತ್ತೆ ಊರಿಗೆ ಹೋಗಿದ್ದರು. ಮಂದಾರ ತನ್ನ ಕೋಣೆಯಲ್ಲಿ ಓದುತ್ತ ಕುಳಿತಿದ್ದಳು.
ಆ ಸಂದರ್ಭದಲ್ಲಿ ಅವಳನ್ನು ಹುಡುಕುತ್ತ ಕೋಣೆಗೆ ಬಂದ ಮಾವ ಇವಳನ್ನು ಎಂದೂ ನೋಡದವನ ರೀತಿ ನೋಡತೊಡಗಿದ. ತನ್ನ ಕಣ್ಣ ಮುಂದೆಯೇ ಬೆಳೆದ ಹುಡುಗಿ ಅಪ್ಸರೆ ತರಹ ಇದ್ದರೂ ತಾನು ಗಮನಿಸಲೇ ಇಲ್ಲವಲ್ಲ ಎಂದು ವಿವೇಕ ಕಳೆದುಕೊಂಡು, ಅವಳು ಕೂಗುವುದಕ್ಕೂ ಆಸ್ಪದ ನೀಡದೆ ಪಶುವಿನಂತೆ ಅವಳ ಮೇಲೆರಗಿದ. ಯಾರಿಗಾದರೂ ಹೇಳಿದರೆ ಸಾಯಿಸಿ ಬಿಡುತ್ತೇನೆ ಎಂದು ಹೆದರಿಸಿ ಹೋದ.
ಅರೆಕ್ಷಣದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವಳ ಮೂಕರೋಧನೆಯನ್ನು ಯಾರೂ ಕೇಳುವವರು ಇರಲಿಲ್ಲ. ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವಳನ್ನು ಎಲ್ಲರೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಪರೀಕ್ಷೆಗೂ ಬಾರದ ಅವಳನ್ನು ವಿಚಾರಿಸಲು ಬಂದ ರವಿಗೆ ಇದನ್ನೆಲ್ಲ ತಿಳಿದು ತುಂಬಾ ಬೇಸರವಾಯಿತು. ಸತ್ಯವನ್ನು ಹೇಗಾದರೂ ತಿಳಿಯಬೇಕೆಂದು ಅವಳನ್ನು ಸೇರಿಸಿದ ಆಸ್ಪತ್ರೆಗೆ ಹೋಗಿ ವೈದ್ಯರ ಹತ್ತಿರ ಮಾತನಾಡಿ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಬೇಡಿಕೊಂಡನು. ಮಂಪರು ಪರೀಕ್ಷೆ ಮಾಡಿಸಿದಾಗ ಅವಳು ಸತ್ಯವನ್ನು ಹೇಳಿದಳು. ಇದರಲ್ಲಿ ಇವಳ ತಪ್ಪೇನಿದೆ ಎನಿಸಿ ಒಂದು ತೀರ್ಮಾನಕ್ಕೆ ಬಂದ.
ಸತ್ಯವನ್ನು ಹೇಳಿದ ಮೇಲೆ ಮಂದಾರ ಸ್ವಲ್ಪ ಗುಣಮುಖಳಾದಳು. ಅತಿಯಾದ ಔಷಧ ಸೇವನೆಯಿಂದ ಅವಳಿಗೆ ಗರ್ಭಪಾತವಾಯಿತು. ಪ್ರತಿದಿನ ರವಿ ಆಸ್ಪತ್ರೆಗೆ ಬಂದು ಪ್ರೀತಿಯಿಂದ ಕೊಡುತ್ತಿದ್ದ ಭರವಸೆಯಿಂದ ಬಹುಬೇಗ ಚೇತರಿಸಿಕೊಂಡಳು.
ನಡೆದ ವಿಷಯವನ್ನೆಲ್ಲ ಅಜ್ಜಿಗೆ ತಿಳಿಸಿದ ರವಿ, ಅವರ ಒಪ್ಪಿಗೆ ಪಡೆದು ಮಂದಾರಳನ್ನು ವಿವಾಹವಾದನು. ಹಾಗೆಯೇ ಅವಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಲಹೆ ನೀಡಿದನು. ಎಂ ಎಸ್ ಸಿ, ಎಂ ಟೆಕ್ ಮಾಡಿದ ಮಂದಾರ ಈಗ ಒಂದು ಸುಂದರ ಮಗುವಿನ ತಾಯಿ. ಹಾಗೆಯೇ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ.
ನಮ್ಮ ಸಮಾಜದಲ್ಲಿ, ನಮ್ಮ ಸುತ್ತಮುತ್ತ ಇಂತಹ ಎಷ್ಟೋ ಮಂದಿ ಮಂದಾರಗಳಿದ್ದಾರೆ. ಅವರೆಲ್ಲರಿಗೂ ಇಂತಹ ರಾಜಕುಮಾರ ಸಿಗುವಂತಿದ್ದರೆ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ