ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೇಸಿಗೆ ಕಾಲವು ಪ್ರತಿ ವರ್ಷಕ್ಕಿಂತ ಈ ವರ್ಷ ಸುಮಾರು 3 ರಿಂದ 4 ಡಿಗ್ರಿ ತಾಪಮಾನ ಹೆಚ್ಚಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಗೆ ಕ್ರಮವಹಿಸಬೇಕೆಂದು ಬೆಳಗಾವಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಬೇಸಿಗೆಯಲ್ಲಿ ವಹಿಸಬೇಕಾದ ಕ್ರಮಗಳು, ಪ್ರಥಮ ಚಿಕಿತ್ಸೆ ಹಾಗೂ ಗಮನಿಸಬೇಕಾದ ಅಂಶಗಳ ಬಗ್ಗೆ ಈ ಕೆಳಕಂಡಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ವಹಿಸಬೇಕಾದ ಕಾಳಜಿ :
ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಿ (ಉದಾ : ಬಿಳಿ ಬಟ್ಟೆ), ಆಗಾಗ್ಗೆ ನಿಧಾನವಾಗಿ ಧಾರಾಳವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ, ಹಣ್ಣಿನ ರಸ/ಪಾನಕಗಳನ್ನು ಕುಡಿಯಿರಿ(ಕಾರ್ಬೊನೇಟೆಡ್ ಪಾನಿಯಗಳನ್ನು ವರ್ಜಿಸಿ, ಕಾಫಿ/ಟಿ ಇತ್ಯಾದಿ ಆದಷ್ಟೂ ಕಡಿಮೆ ಕುಡಿಯಿರಿ), ಹತ್ತಿಯ ನುಣುಪಾದ ಬಟ್ಟೆ/ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿರಿ, ಹೆಚ್ಚಾಗಿ ನೀರು ಮಜ್ಜಿಗೆ/ಎಳನೀರು ಹಾಗೂ ದ್ರವ ಪದಾರ್ಥಳನ್ನು ಸೇವಿಸುವದು, ಬೆಚ್ಚಗಿನ, ಮಸಾಲೆ ರಹಿತ, ಶುದ್ಧ ಸಾತ್ವಿಕ ಆಹಾರ ಸೇವಿಸಿರಿ, ಗಾಳಿಯಾಡುವಂತಿರುವ ಪಾದರಕ್ಷೆ ಧರಿಸಿರಿ, ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದ್ದಲ್ಲಿ ಕೂಡಲೇ ಅವರನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಮತ್ತು ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆತ್ತಿ ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿರಿ (ತಂಪಾದ ಅಥವಾ ಐಸ್ ನೀರಿನಿಂದ ಕೂಡದು) ನಿಧಾನವಾಗಿ ಸ್ವಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಬೇಕು ಹಾಗೂ ಹತ್ತಿರದ ವೈದ್ಯರನ್ನು ಕರೆಸಿರಿ ಅಥವಾ ೧೦೮ಕ್ಕೆ ಕರೆ ಮಾಡಿರಿ.
”ಆಪತ್ಕಾಲದಲ್ಲಿ ನೀವು ಕೈಗೊಳ್ಳುವ ಶೀಘ್ರ, ಸಮಯೋಚಿತ ಪ್ರಜ್ಞಾಪೂರ್ವಕ ಕ್ರಮವು ಆಘಾತಕ್ಕೊಳಗಾದ ವ್ಯಕ್ತಿಯ ಪ್ರಾಣವುಳಿಸಬಲ್ಲದು.” ಚರ್ಮ ಕೆಂಪಗಾದರೆ, ಬೆವರಿನ ಪ್ರಮಾಣ ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘಕಾಲ ತಿವ್ರ ಉಸಿರಾಟವಿದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು.
ಪ್ರಥಮ ಚಿಕಿತ್ಸೆ :
ಆಘಾತಕ್ಕೊಳಗಾದ ವ್ಯಕ್ತಿಯ ಬಟ್ಟೆ, ಪಾದರಕ್ಷೆಗಳನ್ನು ಸಡಿಲಗೊಳ್ಳಿಸಬೇಕು, ತೆಗೆಯಿರಿ, ತಂಪಾದ ನೆರಳಿರುವ ಜಾಗಕ್ಕೆ ಸ್ಥಳಾಂತರಿಸಬೇಕು, ಗಾಳಿ ಹಾಕಿರಿ, ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಿರಿ, ಯಾವುದೇ ಔಷದ ನೀಡಬಾರದು, ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡಬಾರದು, ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ವಲ್ಪ-ಸ್ವಲ್ಪ ಕುಡಿಸಬೇಕು.
ಗಮನಿಸಬೇಕಾದ ಅಂಶಗಳು :
ಬಿಗಿಯಾಗಿ ಗಾಢ ಬಣ್ಣದ ಬಟ್ಟೆ ಧರಿಸಬಾರದು, ಕುಷನ್ ಯುಕ್ತ ಕುರ್ಚಿಯಲ್ಲಿ ಕೂಡಬಾರದು, ಬಾಯಾರಿದಾಗಲೆಲ್ಲಾ ಕಡ್ಡಾಯವಾಗಿ ನೀರನ್ನು ಕುಡಿಯಿರಿ(ಸೊಡಾ ಇತ್ಯಾದಿ ಕಾರ್ಬೋನೇಟೆಡ್ ತಂಪು ಪಾನೀಯವನ್ನು ಕುಡಿಯಬೇಡಿ), ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ, ಕಾಫಿ ಟೀ ಅತೀ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬೇಡಿ, ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬೇಡಿ. ಮಾಂಸಹಾರ ತಿನ್ನಬಾರದು ಮತ್ತು ಮಧ್ಯಪಾನ ಸೇವಿಸಬಾರದು, ಬಿಗಿಯಾದ ಗಾಳಿಯಾಡದ ಪಾದರಕ್ಷೆ/ಶೂ ಧರಿಸಬೇಡಿ, ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ ಶಿತಲೀಕರಿಸಿದ ನೀರಿನಿಂದ ಒರೆಸಬೇಡಿ, ವ್ಯಕ್ತಿಯು ತೊದಲು ತೊದಲಾಗಿ ವಿಚಿತ್ರವಾಗಿ ಮಾತನಾಡಿದರೆ ಶಾಂತಿ ಸಮಾಧಾನದಿಂದ ಶೀಘ್ರವಾಗಿ ಕ್ರಮಕೈಗೊಳ್ಳಬೇಕು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ