Latest

ಎಲ್ಲರಿಗಿಂತ ಭಿನ್ನವಾದ ಅಧಿಕಾರಿ ದಿವ್ಯಾ ಎನ್ನುವ ಈ ಹೆಣ್ಣು ಮಗಳು

ದಿವ್ಯಾ ಹೊಸೂರ್ – ತನ್ನ ಒಡಲಿನಲ್ಲಿ ಅಗಾಧವಾದ ಜ್ಞಾನ ಸಂಪತ್ತನ್ನು, ಆದರ್ಶವನ್ನು ಹೊತ್ತು ಬೆಳಗಾವಿಗೆ ಆಗಮಿಸಿರುವ ಮಂದಹಾಸದ ಹೆಣ್ಣುಮಗಳು.

ಬೆಳಗಾವಿಯ ದಂಡುಮಂಡಳಿ (ಕ್ಯಾಂಟೋನ್ಮೆಂಟ್ ಬೋರ್ಡ್)ಯಲ್ಲಿ ಕಳೆದ ಸುಮಾರು ಒಂದೂವರೆ ವರ್ಷದಿಂದ ಅವಿಶ್ರಾಂತವಾಗಿ ಕೆಲಸ ನಿರ್ವಹಿಸುತ್ತಿರುವ, ಕ್ಯಾಂಟೋನ್ಮೆಂಟ್ ಬೋರ್ಡ್ ಗೆ ಹೊಸ ಕಳೆಯನ್ನು ತಂದಿರುವ ಕ್ರಿಯಾಶೀಲ ಮಹಿಳೆ ದಿವ್ಯಾ.

ಅಪ್ಪಟ ಮಲೆನಾಡಿನ ಈ ಹೆಣ್ಣು ಮಗಳು ಈ ಎಳೆಯ ವಯಸ್ಸಿನಲ್ಲೇ ಮಾಡಿರುವ, ಮಾಡುತ್ತಿರುವ ಸಾಧನೆ ಎಂತವರೂ ಬೆರಗಾಗುವಂತದ್ದು. ಈಗಾಗಲೆ ತಮ್ಮ ಸಿವಿಲ್ ಸರ್ವೀಸ್ (ಐಡಿಇಎಸ್) ನಲ್ಲಿ 7 ವರ್ಷ ಸಾಗಿರುವ ದಿವ್ಯಾ ಗೋವಾ, ಕಾರವಾರಗಳಲ್ಲೂ ಸೇವೆ ಸಲ್ಲಿಸಿ ಬಂದಿದ್ದಾರೆ.

ಎಂಜಿನಿಯರಿಂಗ್ ಓದಿದ ನಂತರ ಯುಪಿಎಸ್ಸಿ ಪರೀಕ್ಷೆಗೆ ಕುಳಿತು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿರುವ ದಿವ್ಯಾ, ನವದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೇಯಸ್ ಜೊತೆ ಒಂದು ವರ್ಷದ ಹಿಂದೆ (ಬೆಳಗಾವಿಗೆ ಆಗಮಿಸಿದ ನಂತರ) ವಿವಾಹವಾಗಿದ್ದಾರೆ.

Home add -Advt

ಅತ್ಯಂತ ಕಠಿಣ ಪರಿಶ್ರಮದ ಮಹಿಳೆಯಾಗಿರುವ ದಿವ್ಯಾ, ಸಿವಿಲ್ ಸರ್ವೀಸ್ ಎನ್ನುವುದು  ಹುದ್ದೆ ಅಥವಾ ಪದವಿ ಎನ್ನುವುದಕ್ಕಿಂತ ದೇಶ ಸೇವೆಯ ಜವಾಬ್ದಾರಿ ಎನ್ನುವ ವ್ಯಾಖ್ಯಾನದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮೂಲತಃ ಶಿರಸಿ -ಸಿದ್ದಾಪುರದವರಾದ ದಿವ್ಯಾ, ತಂದೆಯ ಜೊತೆ ಬೆಳೆದಿದ್ದು, ಚಿತ್ರದುರ್ಗದಲ್ಲಿ. ವಿದ್ಯಾಭ್ಯಾಸವೆಲ್ಲ ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ. ಕೊಯಮತ್ತೂರಿನಲ್ಲಿರುವಾಗ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್ ನ ಸಖ್ಯ ಬೆಳೆಸಿಕೊಂಡಿರುವ ಅವರು, ಯೋಗ, ಧ್ಯಾನ, ಆಧ್ಯಾತ್ಮದಲ್ಲಿ ಈಗಲೂ ಸಾಧನೆ ಮಾಡಿಕೊಂಡು ಬರುತ್ತಿದ್ದಾರೆ.

ಹೈ ಜಂಪ್, ಲಾಂಗ್ ಜಂಪ್, ಬ್ಯಾಂಡ್ಮಿಂಟನ್ ಮೊದಲಾದ ಕ್ರೀಡೆಗಳಲ್ಲಿ, ಮ್ಯಾರಥಾನ್ ಗಳಲ್ಲಿ ಭಾಗವಹಿಸಿ 9ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದಿರುವ ದಿವ್ಯಾ, ಸಂಗೀತ, ನೃತ್ಯಗಳಲ್ಲೂ ಪರಿಣಿತೆ.

ಗೋವಾದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಕಾರವಾರದ ಹೆಚ್ಚುವರಿ ಜವಾಬ್ದಾರಿ ಹೆಗಲ ಮೇಲಿದ್ದರೂ ಪ್ರತಿ ವಾರದ ಕೊನೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸಿ, ಐಐಎಂ ನಲ್ಲಿ ತರಗತಿಗೆ ಹಾಜರಾಗಿ ಸಾರ್ವಜನಿಕ ಆಡಳಿತದಲ್ಲಿ ಎಕ್ಸಿಕ್ಯೂಟಿವ್ ಎಂಬಿಎ ಪದವಿಯನ್ನೂ (ಎರಡನೇ ಮಾಸ್ಟರ್ ಡಿಗ್ರಿ) ಗಳಿಸಿಕೊಂಡಿದ್ದಾರೆ.

ಸಧ್ಯಕ್ಕೆ ಐಎಸ್ ಬಿ- ಮೊಹಾಲಿಯಲ್ಲಿ ಸಸ್ಟೇನೆಬಲ್ ಹೆಬಿಟೇಟ್ ಮತ್ತು ಕ್ಲೈಮೇಟ್ ಚೇಂಜ್ ವಿಷಯದಲ್ಲಿ ಮತ್ತೊಂದು ಮಾಸ್ಟರ್ ಡಿಗ್ರಿಗೆ ಅಧ್ಯಯನ ಮಾಡುತ್ತಿದ್ದಾರೆ.

ಪತಿಯೊಂದಿಗೆ ಈಚೆಗೆ 20,190 ಅಡಿ ಎತ್ತರದ ಕಾಂಗ್ರಿ ಪರ್ವತ (ಹಿಮಾಲಯ) ಏರುವ ಮೂಲಕ, ಈ ಪರ್ವತ ಏರಿರುವ ಭಾರತದ ಮೊದಲ ಸಿವಿಲ್ ಸರ್ವೀಸ್ ದಂಪತಿಗಳೆನ್ನುವ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೊಂದು ತಮ್ಮ ಜೀವಮಾನದಲ್ಲಿ ಮರೆಯಲಾಗದ ಘಟನೆ ಎಂದು ಬಣ್ಣಿಸಿಕೊಳ್ಳುವ  ದಿವ್ಯಾ, ಇಂತಹ ಅವಕಾಶಕ್ಕಾಗಿ ಪ್ರತಿಯೊಬ್ಬರ ಮನಸ್ಸೂ  ತುಡಿಯಬೇಕು ಎನ್ನುತ್ತಾರೆ. ಕಾಂಗ್ರಿ ಪರ್ವತದ ತುತ್ತ ತುದಿ ತಲುಪಿದ ಕ್ಷಣವನ್ನು ನೆನಪಿಸಿಕೊಳ್ಳುವಾಗ ಕಣ್ಮುಚ್ಚಿ ಮತ್ತೊಮ್ಮೆ ಅಲ್ಲಿಗೆ ಹೋಗಿ ಬಂದಂತೆ ಒಂದು ಕ್ಷಣ ಮೈಯೆಲ್ಲ ರೋಮಾಂಚನಗೊಳ್ಳುತ್ತಾರೆ. ಇಂತಹ ಸಾಹಸಗಳಿಂದಲೇ ನಾವು ಬೇರೆಯವರಿಂದ ಭಿನ್ನವಾಗಿ ಕಾಣಿಸಿಕೊಳ್ಳುವುದು ಎನ್ನುತ್ತ ಮೌನವಾಗುತ್ತಾರೆ.

ಮದುವೆಯಾಗಿ ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಸಮಯ ಉತ್ತರದ ತುದಿಯಲ್ಲಿ ಪತಿ, ದಕ್ಷಿಣದ ತುದಿಯಲ್ಲಿ ಪತ್ನಿ ಇದ್ದರೂ ಕೆಲವು ಗುಣಾತ್ಮಕ ಸಮಯವನ್ನು ಇಬ್ಬರಿಗೂ ಇಷ್ಟವಾದ ಪ್ರವಾಸದಲ್ಲಿ ಕಳೆದಿದ್ದಾರೆ.

ಬೆಳಗಾವಿಗೆ ಬಂದಾಗಿನಿಂದಲೂ ತಮ್ಮ ಕಚೇರಿ ಕೆಲಸದಲ್ಲಿ ತುಂಬಾ ಶೃದ್ಧೆಯಿಂದ ತೊಡಗಿಸಿಕೊಂಡಿರುವ ದಿವ್ಯಾ, ಬಿಡುವಿನ ವೇಳೆಯನ್ನು ತಮ್ಮ ಹವ್ಯಾಸ, ಗುರಿ, ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿವಿಲ್ ಸರ್ವೀಸ್ ಎಂದರೆ ಅದೊಂದು ವೈಟ್ ಕಾಲರ್ ಜಾಬ್ ಎನ್ನುವ ಭಾವನೆಯಲ್ಲಿರುವ ಜನಸಾಮಾನ್ಯರಿಗೆ ದಿವ್ಯಾ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಮೇಲಿರುವ ಸಾರ್ವಜನಿಕರ, ಜನಪ್ರತಿನಿಧಿಗಳ, ಹಿರಿಯ ಅಧಿಕಾರಿಗಳ, ಸರಕಾರದ ನಿರೀಕ್ಷೆ, ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ವಯಕ್ತಿಕ ಗುರಿ ಸಾಧನೆ ಮಾಡುತ್ತ ಮುನ್ನಡೆಯುವ ಅವರದೊಂದು ಆದರ್ಶಮಯ ವ್ಯಕ್ತಿತ್ವವೆನಿಸುತ್ತದೆ. ಅವರ ಯಶಸ್ಸಿನ ಪ್ರಯಾಣದಲ್ಲಿ ಬೆಳಗಾವಿಯೂ ಒಂದು ಅವಿಸ್ಮರಣೀಯ ಸ್ಥಳವಾಗಿ ನಿಲ್ಲುವುದೇ ಬೆಳಗಾವಿಗರ ಪಾಲಿಗೆ ಹೆಮ್ಮೆ.

ಇಂಗ್ಲೀಷ್ ಮೂಲ -ಸ್ವಾತಿ ಜೋಗ್

(ಕೃಪೆ -ಆಲ್ ಅಬೌಟ್ ಬೆಳಗಾಂ)

Related Articles

Back to top button