ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಪ್ರೌಢ ಶಾಲೆಗೆ ಎಸ್ಎಲ್ ಸಿಯಲ್ಲಿ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿಗೆ ಬಂಗಾರದ ಉಂಗುರ ಕೊಡುವ ಸಂಪ್ರದಾಯವನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರೂಢಿಸಿಕೊಂಡುಬಂದಿದ್ದು, 2017 – 18ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಯಲ್ಲಿ ಪ್ರಥಮ ಬಂದ ನಿಖಿತಾ ಪಾಟೀಲಳಿಗೆ ಅರ್ದಾತೊಲೆ ಚಿನ್ನದ ಉಂಗುರ ನೀಡಲಾಯಿತು.
ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎನ್. ದಂಡಿನ ಅವರು, ಸುಮಾರು ಆರು ವರ್ಷದಿಂದ ವಿದ್ಯಾರ್ಥಿಗೆ ಬಂಗಾರದ ಉಂಗುರವನ್ನು ತೊಡಿಸುವುದರ ಮೂಲಕ ಅವರನ್ನು ಉತ್ತೆಜಿಸುತ್ತಿರುವ ಹುಕ್ಕೇರಿ ಹಿರೇಮಠಾಧ್ಯಕ್ಷರ ಈ ಕಾರ್ಯ ಶ್ಲಾಘನೀಯ ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಾಧನೆಯನ್ನು ಮಾಡುತ್ತಾ ಬಂದಿದ್ದು, ಈ ವರ್ಷವೂ ಪರಿಶ್ರಮ ಪಟ್ಟು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯನ್ನು ಉನ್ನತ ಮಟ್ಟಕ್ಕೆ ಒಯ್ಯಲು ಎಲ್ಲರ ಸಹಕಾರ ಬೇಕು ಎಂದರು.
ಹುಕ್ಕೇರಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅರಿಹಂತ ಬಿರಾದಾರ ಪಾಟೀಲ, ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನವು ಅಕ್ಷರ ದಾಸೋಹ ವಿಷಯದಲ್ಲಿಯೂ ಕೂಡ ಕ್ರಾಂತಿಯನ್ನು ಮಾಡಿದೆ. ಶಿಕ್ಷಣದ ವಿಷಯದಲ್ಲಿಯೂ ವಿಶಿಷ್ಟ ಕಾರ್ಯವನ್ನು ಮಾಡಿಕೊಂಡು ಬರುತ್ತಿರುವುದು ಅಭಿಮಾನದ ಸಂಗತಿ ಎಂದರು.
ಸರ್ವಧರ್ಮ ಕನ್ನಡ ಸಂಘಟನೆಯ ಅಧ್ಯಕ್ಷ ಗಂಗಾಧರ ಶರಣಯ್ಯ ಹಿರೇಮಠ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಗೋವಾ, ಮಹಾರಾಷ್ಟ್ರ ಇನ್ನೂ ಅನೇಕ ರಾಜ್ಯಗಳಲ್ಲಿ, ಹೊರದೇಶದಲ್ಲಿ ಕೂಡ ಕನ್ನಡದ ಜನರ ಮನವನ್ನು ಗೆದ್ದಿದ್ದಾರೆ. ಕನ್ನಡವನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪ್ರಥಮ ಬಂದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯಾಧ್ಯಾಪಕರಾದ ಎಸ್. ಬಿ. ಜಿನರಾಳೆ ಸ್ವಾಗತಿಸಿದರು. ಸಾನಿಧ್ಯ ವಹಿಸಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, 21ನೇ ತಾರೀಖಿಗೆ ನಡೆಯಬೇಕಾಗಿರುವ ಕಾರ್ಯಕ್ರಮವನ್ನು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ನಾವು ಮೂರು ದಿನಗಳ ನಂತರದಲ್ಲಿ ಏರ್ಪಡಿಸಿದ್ದೇವೆ. ಸಿದ್ದಗಂಗಾ ಶ್ರೀಗಳು ಸ್ವಾಮಿಗಳಿಗೆ ಮಾದರಿ. ಅವರ ಕಾಯಕ ನಿಷ್ಠೆ ಮತ್ತು ಸತತ ಪ್ರಯತ್ನದಿಂದ ಮುಂದೆ ಬಂದು ಎಲ್ಲರನ್ನೂ ಹರಸಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ