
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರ ಅತಿ ದೊಡ್ಡ ಕ್ಷೇತ್ರವಾಗಿದ್ದು, ಹೈಕಮಾಂಡ್ ಆದಷ್ಟು ಬೇಗನೆ ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ ಘೋಷಿತ ಅಭ್ಯರ್ಥಿ ಕ್ಷೇತ್ರದಲ್ಲಿ ಸಂಚರಿಸಿ ಮತಯಾಚಿಸಲು ಅನುಕೂಲವಾಗುತ್ತದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ನಗರದ ಕೆಪಿಟಿಸಿಎಲ್ ಹಾಲ್‌ನಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನನ್ನ ಅಭ್ಯಂತರವಿಲ್ಲ. ಇದು ನನ್ನ ಸ್ವಂತ ಚುನಾವಣೆ ಎಂದು ತಿಳಿದು ಪಕ್ಷದ ಗೆಲುವಿಗೆ ಶ್ರಮಿಸುವೆ. ಗ್ರಾಮೀಣ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಶಾಸಕಿಯಾಗಿ ನುಡಿದಂತೆ ನಡೆಯುತ್ತಿದ್ದೇನೆ. ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸಂತಿಬಸ್ತವಾಡ, ವಾಘವಡೆ ಗ್ರಾಮಗಳ ಆಂತರಿಕ ರಸ್ತೆಗಳ ಸುಧಾರಣೆಗೆ ೭.೫ ಕೋಟಿ ರೂ., ಹಿರೇಬಾಗೇವಾಡಿ ಬಸವೇಶ್ವರ ವೃತ್ತದ ಸುಂದರೀಕರಣಕ್ಕೆ ೫ ಲಕ್ಷ ರೂ. ಹಾಗೂ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪುತ್ಥಳಿ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೫೦ ಲಕ್ಷ ರೂ. ಗಳನ್ನು ಮಂಜೂರು ಮಾಡಿಸಿದ್ದೇನೆ. ಕೊಟ್ಟ ಭರವಸೆಗಳಿಂದ ಹಿಂದೆ ಸರಿಯುವ ಹೆಣ್ಣು ನಾನಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ನುಡಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಮುಖಂಡ ಈರಣ್ಣ ಮತ್ತಿಕಟ್ಟಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದೆ. ಕ್ಷೇತ್ರದ ಕಾರ್ಯಕರ್ತರು ಹೆಚ್ವಿನ ಅನುಭವ ಪಡೆದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿ ಈಗಿನಿಂದಲೇ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ವೀರಮರಣ ಹೊಂದಿದ ಯೋಧರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.