Latest

‘ಕಿಸಾನ್ ಸಮ್ಮಾನ’ ರೈತರಿಗೆ ಸ್ವಾಭಿಮಾನ, ಗೌರವ ತಂದುಕೊಡುವ ಯೋಜನೆ -ಅನಂತಕುಮಾರ ಹೆಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರೈತರು ಸ್ವಾಭಿಮಾನದಿಂದ ಬದುಕಬೇಕಾದರೆ ರೈತರಿಗೆ ಆರ್ಥಿಕ ಸಹಾಯ ಮತ್ತು ಗೌರವ ಕೊಡಬೇಕು. ಪ್ರಸ್ತುತ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಕಾರ್ಯವನ್ನು ಅನುಷ್ಠಾನಗೊಳಿಸಿ ರೈತರಿಗೆ ಸ್ವಾಭಿಮಾನ ಮತ್ತು  ಗೌರವವನ್ನು ನೀಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಕೃಷಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿದ ಅವರು ರೈತರನ್ನು ಉದ್ಧೇಶಿಸಿ ಮಾತನಾಡಿದರು.

Home add -Advt

ರೈತರಿಗೆ ಗೌರವ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮವನ್ನು ಮೊಟ್ಟ ಮೊದಲ ಬಾರಿಗೆ ಪ್ರಸ್ತುತ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ಕುಟುಂಬದವರೆಲ್ಲ ಸೇರಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಡಿಮೆ ಆದಾಯ ಲಭಿಸಿದಾಗ ರೈತರು ಸಾಲದ ಮೊರೆ ಹೋಗುತ್ತಾರೆ. ಅದನ್ನು ತಪ್ಪಿಸಲು ಕೇಂದ್ರ ಸರಕಾರ ಈ ಯೋಜನೆ ಮೂಲಕ ಸಣ್ಣ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.

ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಬೆಲೆಗಿಂತ ಕನಿಷ್ಠ ಒಂದುವರೆ ಪಟ್ಟು ದರವನ್ನು ನೀಡಲಾಗುವುದು. ಈ ರೀತಿ ರೈತರನ್ನು ಪ್ರೋತ್ಸಾಹಿಸಿ ಆರ್ಥಿಕವಾಗಿ ಸಬಲರಾಗಿ ಮಾಡಲು ಕೇಂದ್ರ ಸರಕಾರ ಕಾರ್ಯೋನ್ಮುಖವಾಗಿದೆ. ಬೆಳಗಾವಿ ಭಾಗದಲ್ಲಿ ಜೋಳ ಮತ್ತು ಭತ್ತವನ್ನು ಅಧಿಕವಾಗಿ ಬೆಳೆಯುತ್ತಿದ್ದು, ಇದು ಲಾಭದಾಯಕವಾಗುತ್ತಿಲ್ಲ. ಕಬ್ಬು ಬೆಳೆಗೆ ಅಧಿಕವಾಗಿ ನೀರನ್ನು ಒದಗಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆದ್ದರಿಂದ ಈ ಬೆಳೆಯ ಕ್ಷೇತ್ರವನ್ನು ಕಡಿಮೆ ಮಾಡಿ, ಕಡಿಮೆ ನೀರಿನ ಅವಶ್ಯಕತೆಯುಳ್ಳ ಪರ್ಯಾಯ ಬೆಳೆ ಬೆಳೆಯಬೇಕು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ದೇಶದ ರೈತರ ಆರ್ಥಿಕ ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದ್ದು, ಕೃಷಿ ಸುಧಾರಿತ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರೈತರು ನೂತನ ತಂತ್ರಜ್ಞಾನಗಳನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.

ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಚೇರ್‌ಮನ್ ಮತ್ತು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ. ಆರ್. ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ, ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ. ವ್ಹಿ. ಎಸ್. ಕೋರಿಕಂಥಿಮಠ, ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಿರುವ ಬಿಳಿಜೋಳ, ಕಡಲೆ, ಗೋದಿ ಬೆಳೆಗಳ ಅಧಿಕ ಉತ್ಪಾದನೆ ಮಾಡುವ ತಾಂತ್ರಿಕತೆ ಬಗ್ಗೆ ವೈಜ್ಞಾನಿಕ ವಿವರಣೆ ನೀಡಿದರು.

ಶಾಸಕ ಮಹಾಂತೇಶ ದೊಡಗೌಡರ, ರೈತರು ಕೃಷಿ ವಿಜ್ಞಾನ ಕೇಂದ್ರದ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಕೆಎಲ್‌ಇ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ರೈತಗೀತೆ ಪ್ರಸ್ತುತ ಪಡಿಸಿದರು. ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ ವಂದಿಸಿದರು.

Related Articles

Back to top button