ಪ್ರಗತಿವಾಹಿನಿ ಸುದ್ದಿ, ಕೋಲಾರ/ಬೆಂಗಳೂರು
ಹಲವು ದಿನಗಳಿಂದ ಹೊಗೆಯಾಡುತ್ತಿದ್ದ ಕಾಂಗ್ರೆಸ್ ಶಾಸಕ ಉಮೇಶ ಜಾಧವ ಭಿನ್ನಮತ ಈಗ ರಾಜಿನಾಮೆಯೊಂದಿಗೆ ಅಂತ್ಯವಾಗಿದೆ.
ಚಿಂಚೋಳಿ ಶಾಸಕ ಉಮೇಶ ಜಾಧವ ಸೋಮವಾರ ಬೆಳಗ್ಗೆ ಕೋಲಾರಕ್ಕೆ ತೆರಳಿ ಸ್ಪೀಕರ್ ರಮೇಶ ಕುಮಾರ ಅವರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಇದರಿಂದಾಗಿ ಸಮ್ಮಿಶ್ರ ಸರಕಾರದ ಶಾಸಕರ ಸಂಖ್ಯೆ ಮತ್ತೊಂದು ಕಡಿಮೆಯಾದಂತಾಗಿದೆ.
ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಖರ್ಗೆ ತಮ್ಮ ಮಗನನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ತಮಗೆ ಯಾವುದೇ ಬೆಲೆ ನೀಡುತ್ತಿಲ್ಲ. ಸಚಿವ ಸ್ಥಾನ ತಮಗೆ ಸಿಗಬೇಕಾದದ್ದು ತಮ್ಮ ಮಗನಿಗೆ ಕೊಡಿಸಿದ್ದಾರೆ ಎನ್ನುವ ಅಸಮಾಧಾನ ಉಮೇಶ ಜಾಧವ ಅವರಲ್ಲಿದೆ.
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಉಮೇಶ ಜಾಧವ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಕಲಬುರ್ಗಿಗೆ ಆಗಮಿಸುತ್ತಿದ್ದು, ಅಂದೇ ಜಾಧವ ಬಿಜೆಪಿ ಸೇರಬಹುದು.
ಉಮೇಶ ಜಾಧವ ರಾಜಿನಾಮೆ ವಿಚಾರವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಈಗ ಸ್ವಲ್ಪ ಹೊತ್ತಿಗೆ ಮೊದಲು ಚರ್ಚೆ ನಡೆಸಿದರು.
ಉಮೇಶ ಜಾಧವ ಜೊತೆಗೆ ಕಾಂಗ್ರೆಸ್ ನ ಇನ್ನೂ ಯಾವ್ಯಾವ ಅತೃತ್ಪ ನಾಯಕರು ರಾಜಿನಾಮೆ ಸಲ್ಲಿಸಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.
ಒಟ್ಟಾರೆ ಲೋಕಸಭಾ ಚುನಾವಣೆ ಕಾವೇರುತ್ತಿರುವ ಈ ಸಂದರ್ಭದಲ್ಲೇ ಶಾಸಕರ ರಾಜಿನಾಮೆ ಸಮ್ಮಿಶ್ರ ಸರಕಾರದಲ್ಲಿ ಮತ್ತು ದೋಸ್ತಿ ಪಕ್ಷಗಳಲ್ಲಿ ಗೊಂದಲ ಹುಟ್ಟು ಹಾಕಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ