ಕ್ರೀಡಾ ಸಾಧನೆಗೆ ಶಾರೀರಿಕ ದೃಡತೆ ಜೊತೆಗೆ ಮಾನಸಿಕ ದೃಡತೆಯು ಮುಖ್ಯ
ಉಪ ಅರಣ್ಯಾಧಿಕಾರಿ ಸತ್ಯನಾರಾಯಣ ಅಭಿಪ್ರಾಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದರೆ ಕೇವಲ ಶಾರೀರಿಕವಾಗಿ ಶ್ರಮಿಸಿದರೆ ಸಾಲದು. ಇದರ ಜೊತೆಗೆ ಕ್ರೀಡೆಯ ಬಗ್ಗೆ ಅಭಿಮಾನ, ಆಸಕ್ತಿ ಮತ್ತು ಪ್ರೀತಿ ಇರುವುದರ ಜೊತೆಗೆ ಹೆಮ್ಮೆ ಇರಬೇಕು. ಇವು ಕ್ರೀಡಾಪಟುವನ್ನು ಮಾನಸಿಕವಾಗಿ ಗಟ್ಟಿಗೊಳಿಸಿ ಸಾಧನೆಯ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಉಪ ಅರಣ್ಯಾಧಿಕಾರಿ ಸತ್ಯನಾರಾಯಣ ವೆರ್ಣೇಕರ್ ಹೇಳಿದರು.
ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ, ರಾಷ್ಟೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಿದ ಹಾಗೂ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಜಿ ಐ ಟಿ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಸೋಮವಾರ ಹಮ್ಮಿಕೊಂಡ ವಾರ್ಷಿಕ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಸಾಧಿಸುವ ಛಲವನ್ನು ಹಾಗೂ ಕ್ರೀಡೆಯ ಬಗ್ಗೆ ಅಭಿಮಾನವಿರುವ ಕ್ರೀಡಾ ವ್ಯಕ್ತಿಗಳು ತಮ್ಮ ವೈಫಲ್ಯ ಮತ್ತು ನ್ಯೂನತೆಗಳನ್ನು ಮನ್ನಿಸಲು ಎಂದಿಗೂ ಕೇಳಿಕೊಳ್ಳುವುದಿಲ್ಲ. ಬದಲಾಗಿ, ಪ್ರತಿ ಸೋಲಿನ ಪಾಠವನ್ನು ಶ್ರೇಷ್ಠ ಭವಿಷ್ಯಕ್ಕೆ ಬುನಾದಿಯನ್ನಾಗಿ ಮಾಡಿಕೊಳ್ಳುತ್ತಾರೆ. ಕ್ರೀಡೆ ಕೇವಲ ಆಟವಾಗಿರದೆ ಅದೊಂದು ಮನುಷ್ಯನ ಜೀವನಕ್ಕೆ ಪಾಠವಾಗಬಹುದು ಕಾರಣ ಕ್ರೀಡೆ ಮನುಷ್ಯನಿಗೆ ಸೋಲನ್ನು ಯಾವ ರೀತಿ ಸ್ವೀಕರಿಸಬೇಕು, ಗೆಲುವಿನಲ್ಲಿ ಯಾವ ರೀತಿಯಾಗಿ ವರ್ತಿಸಬೇಕು ಜೊತೆಗೆ ತಾಳ್ಮೆ ಮತ್ತು ಪ್ರಾಮಾಣಿಕತೆಯನ್ನು ಕಲಿಸಿಕೊಡುತ್ತದೆ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅವರು ಸನ್ಮಾನಿಸಿದರು.
ಪ್ರಾಚಾರ್ಯ ಡಾ. ಎ. ಎಸ್. ದೇಶಪಾಂಡೆ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸರಿಯಾದ ಯೋಜನೆ ಮತ್ತು ವ್ಯವಸ್ಥಿತವಾಗಿ ಸಮಯವನ್ನು ನಿರ್ವಹಿಸಿದರೆ ಇಂದಿನ ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಶ್ರೇಷ್ಠ ಸಾಧನೆ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾರ್ಥಿ ವಿಕ್ರಂ ಧಾಮಣಕರ್ ಇವರಿಗೆ ಟ್ರೋಫಿ ಮತ್ತು ೧೦,೦೦೦ ರೂ ನಗದು ಬಹುಮಾನವನ್ನು ನೀಡಿ ಗೌರವಿಸಿದರು. ಜಿಐಟಿಯ 12 ವಿದ್ಯಾರ್ಥಿಗಳು ಯೂನಿವರ್ಸಿಟಿ ಬ್ಲೂಸ್ ಆಗಿ ಆಯ್ಕೆಯಾಗಿದ್ದಾರೆ ಮತ್ತು ಇವರಿಗೆ ಟ್ರೋಫಿ ಮತ್ತು ೨,೫೦೦ ರೂ ಗಳನ್ನು ನಗದು ಬಹುಮಾನವಾಗಿ ನೀಡಿ ಗೌರವಿಸಲಾಯಿತು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ. ವಿ. ಕಡಗದಕೈ ಸ್ವಾಗತಿಸಿದರು, ದೈಹಿಕ ಶಿಕ್ಷಣ ವಿಭಾಗದ ಚೇರಮನ್ ಪ್ರೊ. ರಮೇಶ್ ಮೇದಾರ್ ವಾರ್ಷಿಕ ವರದಿಯನ್ನು ಓದಿದರು. ಮೃದುಲಾ ಹಲಗೇಕರ್ ವಂದಿಸಿದರು, ವೇದಾ ವರ್ಜಿ ನಿರೂಪಿಸಿದರು. ಈ ಸಮಯದಲ್ಲಿ ಕ್ರೀಡಾಪಟುಗಳು, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ