Latest

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಿಎಂ ವಿಲನ್ ಗಳಂತೆ ಬಿಂಬಿಸುತ್ತಿದ್ದಾರೆ -ಅರುಣ ಶಹಾಪುರ

   ಪ್ರಗತಿವಾಹಿನಿ ಸುದ್ದಿ, ತೆಲಸಂಗ
ಸಾಹಿತ್ಯ ಸಮ್ಮೇಳನ ಸಿಫಾರಸ್ಸು ಮಾಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡುತ್ತೇನೆ ಎಂದು ಹೇಳಿದ ಕುಮಾರಸ್ವಾಮಿ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದು ದುರ್ದೈವ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಕಿಡಿಕಾರಿದ್ದಾರೆ.
     ಸೋಮವಾರ ರಾತ್ರಿ ಇಲ್ಲಿಯ ಬಿವಿವಿ ಸಂಘದ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಿಂದ ಈ ಭಾಗದ ಶಿಕ್ಷಣ ಕ್ಷೇತ್ರದ ಪ್ರತಿನಿಧಿಯಾಗಿ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಎಲ್ಲೆಲ್ಲಿ ಹೇಗೇಗೆ ಬರುತ್ತದೆಯೋ ಹಾಗೆ ಹೇಳಿಕೊಂಡು ಹೋಗುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆಯಲ್ಲ. ಕುಮಾರ ಸ್ವಾಮಿಯವರನ್ನು ತಂದು ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಿಸಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ನೋವು ಅರ್ಥವಾಗುತ್ತಿತ್ತು.  
 ಬೆಂಗಳೂರಲ್ಲಿ ಶಿಕ್ಷಣ ದುಡ್ಡುಹೊಡೆಯುವವರ ಕೈಯ್ಯಲ್ಲಿ ಸಿಕ್ಕಿದೆ. ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು ಹಾಗೆಯೇ ಅಂದುಕೊಂಡಿರುವ ಮುಖ್ಯ ಮಂತ್ರಿಗಳು ನಮಗೆ ಸಿಕ್ಕಿದ್ದು ಈ ರಾಜ್ಯದ ದೊಡ್ಡ ದುರ್ದೈವ  ಎಂದು ಹೇಳಿದರು.
50 ವರ್ಷದ ಹಿಂದೆ ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಜೋಳಿಗೆ ಹಾಕಿ ದೇಣಿಗೆ ಸಂಗ್ರಹಿಸಿ ಮಠಾಧೀಶರು ಶಾಲೆಯನ್ನು ತೆರೆಯದೇ ಹೋಗಿದ್ದರೆ ಉತ್ತರ ಕರ್ನಾಟಕದ ಜನರಗತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ ಅವರು, 50 ವರ್ಷದ ನಂತರವೂ ಸರಕಾರಕ್ಕೆ ಪ್ರತಿಯೊಂದು ಹಳ್ಳಿಗೂ ಶಿಕ್ಷಣ ದೊರಕಿಸಲಾಗಿಲ್ಲ ಅನ್ನುವ ಸತ್ಯವನ್ನು ಮುಖ್ಯಮಂತ್ರಿಗಳು
ಅರ್ಥಮಾಡಿಕೊಳ್ಳಬೇಕು. ದಕ್ಷಿಣ ಕರ್ನಾಟಕಕ್ಕೂ ಉತ್ತರ ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಉತ್ತರ ಕರ್ನಾಟಕದ ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಬೆರಳಿಣೆಕೆಯಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿ ಇವತ್ತಿಗೂ ಕಾರ್ಯನಿರ್ವಹಿಸುತ್ತಿವೆ. ಇದು ಮುಖ್ಯಮಂತ್ರಿಗಳಿಗೆ ಗೊತ್ತಾಗಿಲ್ಲ, ದಕ್ಷಿಣ ಕರ್ನಾಟಕದ ಇಂಗ್ಲಿಶ್ ಕಲಿಸುವ ಶಾಲೆಗಳನ್ನು ಮಾತ್ರ ಶಿಕ್ಷಣ ಸಂಸ್ಥೆಗಳು ಅಂದುಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ವಿಲನ್ ರೀತಿಯಲ್ಲಿ ಬಿಂಬಿಸಲಿಕ್ಕೆ ಹೊರಟಿದ್ದಾರೆ.  ಅನೇಕ ದಾನಿಗಳು ತಮ್ಮ ಬೆವರಿನ ಹಣ ಕೊಟ್ಟಿದ್ದರಿಂದ ಗ್ರಾಮದ ಗಡಿಯಲ್ಲಿ ಕಾಲೇಜುಗಳು ಹುಟ್ಟಿ ಮಕ್ಕಳಿಗೆ ಕಾಲೆಜು ಶಿಕ್ಷಣ ದೊರೆಯುತ್ತಿದೆ. ಇದು ಸರಕಾರಕ್ಕೆ ಇವತ್ತಿಗೂ ಸಾಧ್ಯವಾಗಿಲ್ಲ. ಉತ್ತರ ಕರ್ನಾಟಕದ ಖಾಸಗಿ ಶಿಕ್ಷಣ
ಸಂಸ್ಥೆಗಳ ಪಾತ್ರ ಹಿರಿದಾಗಿದೆ. ಯಾರು ದುಡ್ಡಿಗಾಗಿ ಶಿಕ್ಷಣವನ್ನು ವ್ಯವಹಾರಿಕ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಅವರನ್ನು ಶಿಕ್ಷಿಸಿರಿ, ಆದರೆ ಒಳ್ಳೆ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು ಬೆನ್ನುತಟ್ಟಿ. ಉತ್ತರ ಕರ್ನಾಟಕದಲ್ಲಿನ
ಶಿಕ್ಷಣ ಸಂಸ್ಥೆಗಳ ಸ್ಥಿತಿ ಗಂಭೀರವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
     ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಮುಖ್ಯಮಂತ್ರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುತ್ತೇವೆ ಎಂದಿದ್ದಾರೆ ಎಂದು ಅರುಣ ಶಹಪುರ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಹೇಳಿದ್ದರೆ
ಅದನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನುವುದನ್ನು ತಿಳಿಯಬೇಕು. ಗೊತ್ತಿಲ್ಲದೇ ನಾನು ಪ್ರತಿಕ್ರಿಯೆಸುವುದಿಲ್ಲ. ಒಂದುವೇಳೆ ಬಂದ ್ಮಾಡುತ್ತೇವೆ ಎಂದು ಹೇಳಿದ್ದರೆ ಅದಕ್ಕೆ ನಮ್ಮ ಸಹಮತ ಇಲ್ಲ ಎಂದು ಹೇಳಿದರು.
    ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರಸಿದ್ಧರಾಮ ಶ್ರೀಗಳು ಸಾನಿಧ್ಯವಹಿಸಿದ್ದರು. ಹಿರೇಮಠದ ವೀರೇಶ್ವರ ದೇವರು, ಕಾರ್ಯದರ್ಶಿ ವಿ.ಬಿ.ಹಿರೇಮಠ ಸೇರಿದಂತೆ ಅನೇಕರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button