ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಪರಸ್ಪರ ವಿರೋಧಿ ಪಕ್ಷಗಳಾಗಿದ್ದ ಎರಡು ಪಕ್ಷಗಳು ಅಧಿಕಾರಕ್ಕೆ ಕೈಜೋಡಿಸಿ ಸರ್ಕಾರ ರಚಿಸಿದ್ದೂ ಅಲ್ಲದೇ ಇದೀಗ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡಿವೆ. ಆದರೆ, ಈ ಮೈತ್ರಿಯಲ್ಲಿ ನಾಯಕರ ನಡುವೆ ಅಸಮಾಧಾನ, ಅಪನಂಬಿಕೆ ಹೆಚ್ಚಾಗಿ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಮೈತ್ರಿಕೂಟವು ಮತ್ತೆ ಹೊಲಿಗೆ ಹಾಕಲಾರದಂತಹ ಹರಿದ ಬಟ್ಟೆಯಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರರು ಹಾಗೂ ಶಾಸಕರಾದ ಎಸ್.ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಡಿ.ಎಸ್‌ಗೆ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಇನ್ನು, ದೇವೇಗೌಡರು ಸಹ ಎಲ್ಲಿ ನಿಲ್ಲಬೇಕೆಂಬುದು ಗೊತ್ತಾಗದೆ ತುಮಕೂರು ಕ್ಷೇತ್ರವನ್ನು ಮುದ್ದ ಹನುಮೇಗೌಡರಿಂದ ಕಿತ್ತುಕೊಂಡಿದ್ದಾರೆ. ಮುದ್ದ ಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮುದ್ದ ಹನುಮೇಗೌಡರನ್ನು ಹೊರತುಪಡಿಸಿ ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸುವುದಕ್ಕೆ ಅನೇಕ ಕಾಂಗ್ರೆಸ್ ಮುಖಂಡರು ವಿರೋಧಿಸುತ್ತಿದ್ದಾರೆ. ಈಗಾಗಲೇ ಶಾಸಕ ರಾಜಣ್ಣ ಅವರು ಮುದ್ದ ಹನುಮೇಗೌಡರಿಗೆ ಸಾಥ್ ನೀಡಿದ್ದಾರೆ ಎಂದರು.
ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಜೆ.ಡಿ.ಎಸ್‌ಗೆ ಅಭ್ಯರ್ಥಿ ಸಿಗದೇ ಕಾಂಗ್ರೆಸ್ ನಾಯಕರೊಬ್ಬರನ್ನು ಕರೆತಂದು ಟಿಕೆಟ್ ನೀಡಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಗೆದ್ದರೆ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಮತಕ್ಕಾಗಿ ಬ್ಲಾಕ್ ಮೇಲ್ ತಂತ್ರ ಅನುಸರಿಸಲಾಗುತ್ತಿದೆ. ವೋಟಿಗಾಗಿ ಇಂತಹ ಕೆಳ ಮಟ್ಟದ ರಾಜಕೀಯಕ್ಕೆ ಇಳಿಯಬಾರದಿತ್ತು ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಆಡಳಿತ ಯಂತ್ರ ದುರುಪಯೋಗ, ಶಾಂತಿ ಸುವ್ಯವಸ್ಥೆಗೆ ಧಕ್ಕೆ, ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಚುನಾವಣೆಯಲ್ಲಿ ಮತದಾರರಿಗೆ ಹಣದ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಮತದಾರರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಚುನಾವಣೆ ಶಾಂತಿಯುತವಾಗಿ ನಡೆಯಲು ಬಿಗಿ ಬಂದೋಬಸ್ತ್ ಮಾಡಬೇಕು. ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಬಿಗಿ ಭದ್ರತೆಯಲ್ಲಿ ಮುಕ್ತವಾಗಿ ಚುನಾವಣೆ ನಡೆಯುವಂತಾದರೆ ಮೂರು ಕ್ಷೇತ್ರಗಳಲ್ಲೂ ರಾಜ್ಯದ ಜನತೆ ಎಂದಿಗೂ ನೆನಪಿಟ್ಟಿಕೊಳ್ಳುವಂತಹ ಅಚ್ಚರಿಯ ಫಲಿತಾಂಶಗಳು ಹೊರಬೀಳಲಿವೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮವೆಂದು ಚುನಾವಣಾ ಆಯೋಗ ಘೋಷಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಬಾಹ್ಯಾಕಾಶ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಇಂದು ಮತ್ತೊಂದು ಮಹಾ ಸಾಧನೆ ಮಾಡಲಾಗಿದೆ. ಡಿ.ಆರ್.ಡಿ.ಒ ಅಭಿವೃದ್ಧಿ ಪಡಿಸಿದ ಉಪಗ್ರಹ ವಿರೋಧಿ ಕ್ಷಿಪಣೆ ಇಂದು ಶತ್ರು ರಾಷ್ಟ್ರಗಳ ಉಪಗ್ರಹವೊಂದನ್ನು ಕೇವಲ ಮೂರೇ ನಿಮಿಷಗಳಲ್ಲಿ ನಾಶಗೊಳಿಸಿದೆ. ಈ ಉಪಗ್ರಹ ಭಾರತೀಯ ಸೇನಾ ನೆಲೆಗಳು, ರಕ್ಷಣಾ ವಲಯದ ಕೇಂದ್ರಗಳ ಮೇಲೆ ಕಣ್ಣಿಟ್ಟಿತ್ತು. ಮಿಷನ್ ಶಕ್ತಿ ಕಾರ್ಯಾಚರಣೆ ನಡೆಸಿದ ಡಿ.ಆರ್.ಡಿ.ಒ ಸಾಧನೆ ಅಭಿನಂದನಾರ್ಹ. ಕಾಂಗ್ರೆಸ್ ಪಕ್ಷ ಮಿಷನ್ ಶಕ್ತಿ ಕಾರ್ಯಾಚರಣೆಯ ಶ್ರೇಯಸ್ಸು ನರೇಂದ್ರ ಮೋದಿಯವರು ಪಡೆಯಬಾರದು ಎಂದು ಪ್ರತಿಕ್ರಿಯಿಸಿದೆ. ನಿರ್ದಿಷ್ಟ ದಾಳಿಗಳನ್ನೂ ಪ್ರಶ್ನಿಸಿದ್ದ ಕಾಂಗ್ರೆಸ್, ಸದ್ಯ ಇಂದಿನ ಕಾರ್ಯಾಚರಣೆಗೆ ಸಾಕ್ಷ್ಯ ಕೇಳಿಲ್ಲ. ಮಿಷನ್ ಶಕ್ತಿಯ ಸಂಪೂರ್ಣ ಶ್ರೇಯಸ್ಸು ಡಿ.ಆರ್.ಡಿ.ಒ ತಂಡಕ್ಕೆ ಸಲ್ಲಬೇಕೆಂದು ಪ್ರಧಾನಮಂತ್ರಿಯವರೇ ಹೇಳಿದ್ದಾರೆ ಎಂದರು.
ಪುತ್ರನ ಕ್ಷೇತ್ರಕ್ಕಷ್ಟೇ ಸೀಮಿತವಾದ ಮುಖ್ಯಮಂತ್ರಿ : ತೇಜಸ್ವಿನಿ ಗೌಡ ಟೀಕೆ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮೂರು ತಾಸು ಬಂದ್ ಮಾಡಿರುವುದು, ಅಂದು ಮಂಡ್ಯದಲ್ಲಿ ವಿದ್ಯುತ್ ಪೂರೈಕೆ ನಿಲ್ಲಿಸಿರುವುದು ಇದಕ್ಕೆ ನಿದರ್ಶನವಾಗಿದೆ. ಕುಮಾರಸ್ವಾಮಿ ಅವರು ತಾವು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಬಿಟ್ಟು ಪುತ್ರನ ಗೆಲುವಿಗಾಗಿ ಮಂಡ್ಯಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಎದೆಗುಂದಿಸುವ ಪ್ರಯತ್ನಗಳು ನಡೆಯುತ್ತಿವೆ. ಅಂಬರೀಶ್ ಅವರ ಸಾವನ್ನು ಜೆಡಿಎಸ್ ಚುನಾವಣೆಗೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸುಮಲತಾ ಅವರನ್ನು ಹೇಗಾದರೂ ಸೋಲಿಸಲೇಬೇಕೆಂದು ದುಸ್ಸಾಹಸಕ್ಕೂ ಜೆಡಿಎಸ್ ಇಳಿಯುತ್ತಿದೆ. ಮತದಾರರು ಮೈತ್ರಿಕೂಟದ ದುಷ್ಟ ಎತ್ತುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಕೇಶವ್ ರಾಜಣ್ಣ ಎಂಬುವವರು ೨೫ ಸಾವಿರ ಮಜ್ಜಿಗೆ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಇದಕ್ಕೆ ತಗುಲಿರುವ ವೆಚ್ಚವೂ ಚುನಾವಣಾ ವೆಚ್ಚಕ್ಕೆ ಸೇರುತ್ತದೆ. ಪ್ಯಾಕೆಟ್‌ಗಳಲ್ಲಿ ಏನಿತ್ತು ಎಂಬುದೂ ಗೊತ್ತಿಲ್ಲ. ಇಂತಹ ಪ್ರಕರಣಗಳ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ತೇಜಸ್ವಿನಿ ಹೇಳಿದರು.
ರಾಜ್ಯ ಸಹವಕ್ತಾರರಾದ ಎ.ಹೆಚ್.ಆನಂದ, ಕು.ಮಂಜುಳಾ, ಮಾಳವಿಕ ಅವಿನಾಶ್ ಇದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ