ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಿಂದ ತಕ್ಷಣಕ್ಕೆ ಬೆಲ್ಲಿ ಕಾರ್ಗೋ ಸೇವೆ ಆರಂಭಿಸಲು ಹಾಗೂ 3-6 ತಿಂಗಳಲ್ಲಿ ಹಳೆಯ ವಿಮಾನ ನಿಲ್ದಾಣವನ್ನು ದುರಸ್ತಿಪಡಿಸಿದ ನಂತರ ಅಲ್ಲಿಂದ ಪೂರ್ಣಪ್ರಮಾಣದ ಕಾರ್ಗೋ ಸೇವೆ ಆರಂಭಿಸಲು ಬೆಳಗಾವಿಯಲ್ಲಿ ಗುರುವಾರ ನಡೆದ ಉನ್ನತಮಟ್ಟದ ಸಭೆ ತೀರ್ಮಾನಿಸಿತು.
ಬೆಳಗಾವಿಯಿಂದ ಕಾರ್ಗೋ ವಿಮಾನ ಸೇವೆ ಆರಂಭಿಸುವ ಹಿನ್ನೆಲೆಯಲ್ಲಿ ಚರ್ಚಿಸಲು ಗುರುವಾರ ಉನ್ನತ ಅಧಿಕಾರಿಗಳು ಮತ್ತು ಪಾಲುದಾರರ ಸಭೆ ನಡೆಯಿತು.
ಕಾರ್ಗೋ ಡೈರಕ್ಟರೇಟ್ ಅಧಿಕಾರಿ ಗೋಕುಲ್ ಮತ್ತು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ ಮೌರ್ಯ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಬೆಳಗಾವಿ ಕಾರ್ಗೋ ಹಬ್ ಆಗಲು ಯೋಗ್ಯವಾಗಿದೆ. ಇಲ್ಲಿಂದ ಕಾರ್ಗೋ ಸೇವೆ ತುರ್ತು ಅಗತ್ಯವಾಗಿದ್ದು, ಕೃಷಿ, ತೋಟಗಾರಿಕೆ ಸೇರಿದಂತೆ ಉದ್ಯಮಗಳಿಗೂ ಅವಶ್ಯವಾಗಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.
ಕ್ರೆಡೈ, ಏಕಸ್, ತೋಟಗಾರಿಕೆ ವಿವಿ, ಕೃಷಿ ವಿವಿ, ಕೆಎಲ್ಎಸ್ ಐಎಂಇಆರ್, ವಿವಿಧ ರೈತ ಸಂಘಟನೆಗಳು, ಪ್ರೊಫೇಶನಲ್ ಫೋರಮ್, ಆರ್ ಸಿಯು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ತಜ್ಞರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿಯಿಂದ ಕಾರ್ಗೊ ಸೇವೆಗೆ ಇರುವ ಅವಕಾಶಗಳ ಕುರಿತು ಮತ್ತು ಈ ಸಂಬಂಧ ಸಾರ್ವಜನಿಕರಲ್ಲಿ, ಉದ್ಯಮಿಗಳಲ್ಲಿ ಅರಿವು ಮೂಡಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಬೆಳಗಾವಿಯ ಹಳೆಯ ವಿಮಾನ ನಿಲ್ದಾಣ ಕಟ್ಟಡವನ್ನು ಕಾರ್ಗೋ ವಿಮಾನಕ್ಕೆ ಬಳಸುವ ಕುರಿತೂ ಚರ್ಚಿಸಲಾಯಿತು. ಇನ್ನು 6 ತಿಂಗಳೊಳಗೆ ಆ ವಿಮಾನ ನಿಲ್ದಾಣವನ್ನು ಕಾರ್ಗೋ ಸೇವೆಗೆ ಸಿದ್ಧಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ