ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾ.24ರಂದು ನಾಪತ್ತೆಯಾಗಿದ್ದ ಬೊಮ್ಮನಟ್ಟಿಯ ಯುವಕ ರವಿ ಯಲ್ಲಪ್ಪ ಮುಕಣ್ಣವರ್ (25) ಶವ ಬಾವಿಯಲ್ಲಿ ಪತ್ತೆಯಾಗಿದೆ.
ತಂದೆ ಇಲ್ಲದ ಈತ ಹೊನಗಾದ ದಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೋಳಿ ಹಬ್ಬಕ್ಕೆ ಮನೆಗೆ ಹೋಗಿ ಬರುವುದಾಗಿ ಹೇಳಿದ ಆತ ಮನೆಗೂ ಹೋಗದೆ ನಾಪತ್ತೆಯಾಗಿದ್ದ. ಇದರಿಂದ ಗಾಭರಿಗೊಂಡ ಆತನ ತಾಯಿ ೨೪ ರಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರವಿಗಾಗಿ ಹುಡುಕಾಟ ನಡೆಸಿದ್ದರು. ಇಂದು ಮಧ್ಯಾಹ್ನ ಅದೆ ಗ್ರಾಮದ ಹೊರವಲದಲ್ಲಿರುವ ಬಾವಿಯಲ್ಲಿ ತೇಲುತ್ತಿದ್ದ ರವಿಯ ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿ, ಆತ್ಮಹತ್ಯೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

ಅದೇ ಗ್ರಾಮದ ಆತನಿಗಿಂತ ಹಿರಿ ವಯಸ್ಸಿನ ಯುವತಿ ಜೊತೆ ರವಿ ಸಂಬಂಧವಿಟ್ಟುಕೊಂಡಿದ್ದ ಎನ್ನಲಾಗುತ್ತಿದೆ. ಇತ್ತೀಚೆಗೆ ಕೆಲವರು ಇವರು ಜೊತೆಯಾಗಿದ್ದಾಗ ನೋಡಿದ್ದರು. ಇದರಿಂದ ಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ ಮೂಲಗಳು ತಿಳಿಸಿವೆ.
ಆದರೆ ಇದು ನಿಜಕ್ಕೂ ಆತ್ಮಹತ್ಯೆಯೋ ಅಥವಾ ಕೋಲೆಯೋ ಎಂದು ಗ್ರಾಮಸ್ಥರಲ್ಲಿ ಸಂಶಯ ಹುಟ್ಟಿದ್ದು ಹೆಚ್ಚಿನ ತನಿಖೆ ನಡೆಸುವಂತೆ ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಕತಿ ಪಿ ಎಸ್ ಐ ಒಂದು ವೇಳೆ ಮಗನ ಸಾವಿನ ಬಗ್ಗೆ ಆತನ ತಾಯಿಗೆ ಸಂಶಯವಿದ್ದು, ಪ್ರಕರಣ ದಾಖಲಿಸಿದರೆ ಕೂಲಂಕಷವಾಗಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ತಂದೆಯಿಲ್ಲದ ಈತ ತಾಯಿ ಜೊತೆ ವಾಸವಾಗಿದ್ದನು. ಒಬ್ಬನೇ ಮಗನಾಗಿದ್ದ ಈತನಿಗೆ ಮೂರು ಜನ ಸಹೋದರಿಯರಿದ್ದಾರೆ. ರವಿ ಎಸ್ ಎಸ್ ಎಲ್ ಸಿ ಮುಗಿಸಿ ಹೋಟೆಲ್ ಗಳಲ್ಲಿ ಕೆಲಸ ಮಾಡಿ ಸಹೋದರಿಯ ಮದುವೆ ಮಾಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ