Latest

ನಾಳೆ ಬೆಳಗ್ಗೆ 9 ಗಂಟೆಗೆ ಕತ್ತಿ ಸಹೋದರರ ಜೊತೆ ಯಡಿಯೂರಪ್ಪ ಚರ್ಚೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಕತ್ತಿ ಸಹೋದರರ ಜೊತೆ ನಾಳೆ ಬೆಳಗ್ಗೆ 9 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ.

          ಕತ್ತಿ ಮುನಿಸು: ನಾಳೆ ಬೆಳಗಾವಿಗೆ ಧಾವಿಸುತ್ತಿರುವ ಯಡಿಯೂರಪ್ಪ

ಇಲ್ಲಿಯ ಕೆಎಲ್ಇ ಅತಿಥಿಗೃಹದಲ್ಲಿ ಸಭೆ ಆಯೋಜಿಸಲಾಗಿದ್ದು, ಉಮೇಶ ಕತ್ತಿ ಮತ್ತು ರಮೇಶ ಕತ್ತಿಯೊಂದಿಗೆ ಯಡಿಯೂರಪ್ಪ ಚರ್ಚಿಸುವರು. ಮೊದಲು ಕತ್ತಿ ಸಹೋದರರ ಜೊತೆ ಚರ್ಚಿಸುವ ಯಡಿಯೂರಪ್ಪ ನಂತರ ಸ್ಥಳೀಯ ಬಿಜೆಪಿ ಮುಖಂಡರೊಂದಿಗೂ ಮಾತುಕತೆ ನಡೆಸಲಿದ್ದಾರೆ. 

Home add -Advt

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪೂರ್ವ ನಿಯೋಜಿತ ಸಭೆಗೆ ಬೆಂಗಳೂರಿಗೆ ತೆರಳುತ್ತಿದ್ದು, ಸಂಸದ ಸುರೇಶ ಅಂಗಡಿ ಹಾಗೂ ಶಾಸಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. 

ಚಿಕ್ಕೋಡಿ ಕ್ಷೇತ್ರದ ಟಿಕಟ್ ಗಾಗಿ ಪಟ್ಟು ಹಿಡಿದಿರುವ ರಮೇಶ ಕತ್ತಿ, ಅದನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಧಾನಕ್ಕೆ ಒಪ್ಪುವ ಸಾಧ್ಯತೆ ಇಲ್ಲ.

ಆದರೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್  ಸಂಘಪರಿವಾರದ ನಿರ್ಧಾರವಾಗಿರುವುದರಿಂದ ಅದನ್ನು ಬದಲಾಯಿಸುವುದಕ್ಕೆ ಯಡಿಯೂರಪ್ಪ ಅವರಿಂದ ಸಾಧ್ಯವಾಗುವುದೇ ಎನ್ನುವುದೇ ಪ್ರಶ್ನೆಯಾಗಿದೆ. 

ಈ ಮಧ್ಯೆ, ಸೋಮವಾರ ಹುಕ್ಕೇರಿಯಲ್ಲಿ ಆಯೋಜಿಸಿದ್ದ ಕತ್ತಿ ಅಭಿಮಾನಿಗಳ ಸಭೆಯನ್ನು ಯಡಿಯೂರಪ್ಪ ಆಗಮನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಯಡಿಯೂರಪ್ಪ ಸಂಧಾನ ಯಶಸ್ವಿಯಾದರೆ ಬಿಜೆಪಿಯಲ್ಲೇ ಕತ್ತಿಸಹೋದರರು ಮುಂದುವರಿಯಲಿದ್ದಾರೆ. 

ಈಗಾಗಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಸಿ.ಎಂ.ಇಬ್ರಾಹಿಂ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಕತ್ತಿ ಸಹೋದರರ ಜೊತೆ ಮಾತುಕತೆ ನಡೆಸಿ, ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ಸುದ್ದಿ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಯಡಿಯೂರಪ್ಪ ಸೂಚನೆ ಮೇರೆಗೆ ಭಾನುವಾರ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕೂಡ ಉಮೇಶ ಕತ್ತಿ ಜೊತೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಸೇರಿದರೂ ಯಾವುದೇ ಭವಿಷ್ಯವಿಲ್ಲ ಎನ್ನುವುದನ್ನು ಕೋರೆಯವರು ಕತ್ತಿಗೆ ಮನದಟ್ಟು ಮಾಡುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. 

ಸಂಸದ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮೊದಲಾದವರು ಸಹ ಕತ್ತಿ ಜೊತೆ ಮಾತುಕತೆ ನಡೆಸಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. 

ಯಡಿಯೂರಪ್ಪ ಸಭೆ ಎಲ್ಲರ ಕುತೂಹಲ ಕೆರಳಿಸಿದ್ದು, ಸಭೆ ವಿಫಲವಾದಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. 

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button