Latest

ನಿಜ ಜೀವನದಲ್ಲಿ ಬಸವಣ್ಣನವರ ವಿಚಾರಧಾರೆ ಅಳವಡಿಸಿಕೊಳ್ಳಬೇಕಿದೆ -ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬಸವಣ್ಣನವರ ವಿಚಾರ ಧಾರೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪ್ರತಿನಿತ್ಯ ಪಾಲಿಸಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
ಲಿಂಗಾಯತ ಸೇವಾ ಸಮಿತಿ, ಬಸವ ಪ್ರತಿಷ್ಠಾನ, ಸಂಚಾರಿ ಗುರು ಬಸವ ಬಳಗ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಆಶ್ರಯದಲ್ಲಿ ನಗರದ ಶ್ರೀ ದಾನಮ್ಮ ದೇವಿ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇವಲ ಜಯಂತಿಯನ್ನು ಆಚರಿಸದೆ, ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುತ್ತಿರುವುದು ಸಂತಸ ತಂದಿದೆ ಎಂದ ಅವರು, ಬಸವ ಜಯಂತಿ ಕಾರ್ಯಕ್ರಮಗಳಿಗೆ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, 12 ನೇ ಶತಮಾನದಲ್ಲಿಯೇ ಬಸವಣ್ಣನವರು ವರ್ಣ ಮತ್ತು ವರ್ಗ ವ್ಯವಸ್ಥೆಯ ವಿರುದ್ಧ ಸಮಾನತೆಯ ಸಮಾಜ ನಿರ್ಮಿಸುವ ಕ್ರಾಂತಿ ಆರಂಭಿಸಿದ್ದರು. ಕೆಳ ವರ್ಗದ ಜನರನ್ನು ಮೃಗಗಳಿಗಿಂತ ಕಡೆಯಾಗಿ ಕಾಣುತ್ತಿದ್ದ ಅಂದಿನ ದಿನಮಾನಗಳಲ್ಲಿ ಕೆಳ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿದ್ದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಜಾರಿಗೆ ತಂದಿದ್ದರು. ಸಮಾನತೆಯ ಸಮಾಜ ನಿರ್ಮಾಣದ ಆ ಕ್ರಾಂತಿಯನ್ನು ನಾವಿಂದು ಮುಂದುವರೆಸಬೇಕಾಗಿದೆ ಎಂದರು.
ಬಸವ ಜಯಂತಿಯ ಕಾರ್ಯಕ್ರಮಗಳು ಕೇವಲ ಬೆಳಗಾವಿ ಉತ್ತರಕ್ಕೆ ಸೀಮಿವಾಗಿದ್ದವು. ದಕ್ಷಿಣ ಭಾಗದಲ್ಲೂ ಬಸವ ಜಯಂತಿಯ ಕಾರ್ಯಕ್ರಮಗಳು ನಡೆಯಬೇಕು ಎಂಬ ಉದ್ದೇಶದಿಂದ ಲಿಂಗಾಯತ ಸೇವಾ ಸಮಿತಿಯನ್ನು ಸ್ಥಾಪಿಸಿ, ಆ ಸಮಿತಿಯ ಮೂಲಕ ಖಾಸಬಾಗದ ಬಸವೇಶ್ವರ ವೃತ್ತದಲ್ಲಿ 18 ಅಡಿ ಎತ್ತರದ ಬಸವಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಬಸವ ಜಯಂತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ನಗರ ಸೇವಕ ದೀಪಕ ಜಮಖಂಡಿ ಮಾತನಾಡಿ, ಈ ಹಿಂದೆ ದಕ್ಷಿಣ ಭಾಗದಲ್ಲಿ ಬಸವ ಜಯಂತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಾರ್ಯಕ್ರಮಗಳಿಗೆ ಮತ್ತೆ ಚಾಲನೆ ನೀಡಿರುವ ಲಿಂಗಾಯತ ಸೇವಾ ಸಮಿತಿಯ ಪದಾಧಿಕಾರಿಗಳು ಅಭಿನಂದನಾರ್ಹರು. ಇವ ನಮ್ಮವ ಇವ ನಮ್ಮವ ಎಂಬ ಬಸವಣ್ಣನವರ ಸಂದೇಶದಂತೆ ಎಲ್ಲರು ಒಂದಾಗಿ ಬಸವ ತತ್ವಗಳನ್ನು ಪಾಲಿಸಬೇಕಾಗಿದೆ ಎಂದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿದರು.  ಬಸವ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ವಚನ ಕಂಠ ಪಾಠ, ಬಸವಾದಿ ಶರಣರ ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಹಾಗೂ  ಪಿಯುಸಿ ಮತ್ತು ಮೆಟ್ರಿಕ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭೆಗಳಿಗೆ ತೇಲಸಂಗ ಉದ್ಯೋಗ ಸಮೂಹ ಸಂಸ್ಥೆ ಹಾಗೂ ಬಸವ ಪ್ರತಿಷ್ಠಾನದಿಂದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಲಿಂಗಾಯತ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ ತೇಲಸಂಗ, ತೇಲಸಂಗ ಉದ್ಯೋಗ ಸಂಸ್ಥೆಗಳ ಅಧ್ಯಕ್ಷೆ ವಿದ್ಯಾ ತೇಲಸಂಗ, ಗುರುಬಸಪ್ಪ ಚೊಣ್ಣದ, ಡಾ. ಎಸ್.ಎಂ.ದೊಡಮನಿ, ಅರವಿಂದ ಪರುಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ರಾಜು ಕುಂದಗೋಳ ಸ್ವಾಗತಿಸಿದರು. ಮಹಾಂತೇಶ ತೋರಣಗಟ್ಟಿ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button