ಪಟಾಕಿ ಸಿಡಿತ ಪ್ರಕರಣದಲ್ಲಿ ಮತ್ತೊಂದು ಬಲಿಯಾಗಿದೆ. ಪಟಾಕಿ ಸಿಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.
ಶೇ.40ರಷ್ಟು ದೇಹ ಸುಟ್ಟು, ಕಳೆದ ಎಂಟು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗರ್ಭಿಣಿ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅಶ್ವಿನಿ ಮೃತ ಗರ್ಭಿಣಿ.
ಕನಕಪುರದ ನಿವಾಸಿಯಾಗಿದ್ದ ಅಶ್ವಿನಿ, ನವೆಂಬರ್ 10 ಮನೆಯ ಮುಂದೆ ಪಟಾಕಿ ಬಾಕ್ಸ್ ಹಿಡಿದು ಕುಳಿತುಕೊಂಡಿದ್ದರು. ಇದೇ ವೇಳೆ ಮನೆಯ ಮುಂದೆ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸಿಡಿದ ಪಟಾಕಿ ಅಶ್ವಿನಿ ಬಳಿಯಿದ್ದ ಬಾಕ್ಸ್ಗೆ ಬಂದುಬಿದ್ದಿದೆ. ಪರಿಣಾಮ ಬಾಕ್ಸ್ನಲ್ಲಿದ್ದ ಪಟಾಕಿಗಳು ಒಟ್ಟಿಗೆ ಸ್ಪೋಟಗೊಂಡಿವೆ. ಈ ಭೀಕರ ಸ್ಫೋಟಕ್ಕೆ ಅಶ್ವಿನಿ ಮುಖ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಸುಟ್ಟಗಾಯಗಳಾಗಿದ್ದವು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ಕರೆತಂದಾಗಲೇ ಅಶ್ವಿನಿಯ ದೇಹದ ಶೇ.40ರಷ್ಟು ಭಾಗ ಸುಟ್ಟು ಹೋಗಿತ್ತು. ಏಳು ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆ ವೈದ್ಯರಿಗೆ ಮತ್ತಷ್ಟು ಸವಾಲಾಗಿತ್ತು. ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಆರಂಭಿಸಿದ್ದ ವೈದ್ಯರು ಕಳೆದ ಎಂಟು ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಿದ್ದರು. ಆದರೂ ಸುಟ್ಟಗಾಯಗಳ ತೀವ್ರತೆ ಮತ್ತು ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅಶ್ವಿನಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ತಾಯಿ ಮತ್ತು ಕಂದಮ್ಮನ ಉಳಿಸಲು ವೈದ್ಯರು ನಡೆಸಿದ ನಿರಂತರ ಪ್ರಯತ್ನ ಫಲನೀಡಲಿಲ್ಲ.
firecracker tragedy,7 months,pregnant woman,death,bengaluru




