ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಾರ್ವಜನಿಕವಾಗಿ ಪತ್ನಿಯನ್ನು ಕೊಚ್ಚಿ ಕೊಲೆಗೈದಿದ್ದ ವ್ಯಕ್ತಿಗೆ ಬೆಳಗಾವಿಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಹುಕ್ಕೇರಿ ತಾಲೂಕಿನ ಅಲದಾಳದ ನಾಗರಾಜ ಯಲ್ಲಪ್ಪ ನಾಯಿಕ ಮರಣದಂಡನೆಗೆ ಒಳಗಾದವನು. ಈತನು ತನ್ನ ಪತ್ನಿ ಗೀತಾಳನ್ನು 2016 ಮಾರ್ಚ್ 28ರಂದು ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕ ಹಿಂಡಾಲ್ಕೋ ಬ್ರಿಜ್ ಸಮೀಪ ಕೊಚ್ಚಿ ಕೊಲೆ ಮಾಡಿದ್ದ. ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಜಿ ಮರಣದಂಡನೆ ಶಿಕ್ಷೆ ವಿಧಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮುರಳಿಧರ ಕುಲಕರ್ಣಿ ವಾದ ಮಂಡಿಸಿದ್ದರು.
ಪ್ರಕರಣದ ವಿವರ:
ನಾಗರಾಜ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ನಿತ್ಯವೂ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಹೆಂಡತಿ ಗೀತಾ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ತನಗೆ ಕುಡಿಯಲು ಹಣ ನೀಡುವಂತೆ ಆತ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಗೀತಾ ತನ್ನ ತವರು ಮನೆಯಾದ ಹಿಂಡಾಲ್ಕೋ ಕ್ವಾಟರ್ಸ್ ನಲ್ಲಿ ಇರುತ್ತಿದ್ದಳು. ಅಲ್ಲಿಗೂ ಹೋಗುತ್ತಿದ್ದ ನಾಗರಾಜ ಗೀತಾಳ ತಂದೆ ತಾಯಿಗೂ ಬೆದರಿಕೆ ಹಾಕುತ್ತಿದ್ದ. ಪತ್ನಿಯನ್ನು ತನ್ನೊಂದಿಗೆ ಕಳಿಸದಿದ್ದಲ್ಲಿ ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ.
ಆತನೊಂದಿಗೆ ಆಕೆ ಹೋಗಲು ಒಪ್ಪದ್ದರಿಂದ ಸಿಟ್ಟಿಗೆದ್ದ ನಾಗರಾಜ ಅವಳು ಕೆಲಸಕ್ಕೆ ಹೋರಟಿದ್ದಾಗ ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದಿದ್ದ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ