ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಕ್ಕಳು ಪಾಠಕ್ಕಷ್ಟೆ ಮಹತ್ವ ಕೊಡದೆ ಆಟಗಳಂಥ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ಕೊಡಬೇಕು. ಮಕ್ಕಳಿಗೆ ಈಗಿನಿಂದಲೇ ತಮ್ಮ ಸ್ವಂತ ಕೆಲಸಗಳನ್ನು ಮಾಡುವಂತೆ ಪಾಲಕರು ಹೇಳಿಕೊಡಬೇಕು ಎಂದು ಬೆಳಗಾವಿಯ ಖ್ಯಾತ ವೈದ್ಯೆ ಡಾ. ಸೋನಾಲಿ ಸರ್ನೊಬತ್ ಹೇಳಿದರು.
ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನಲ್ಲಿ ಬುಧವಾರ ನಡೆದ ೪ನೇ ಪೂರ್ವ-ಪ್ರಾಥಮಿಕ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ತುಂಬಾ ಆಗುತ್ತಿದ್ದು, ಇದರಿಂದ ಮಕ್ಕಳ ಬೆಳವಣಿಗೆಗೆ ಹಾನಿಯಾಗುತ್ತಿದ್ದು, ಪ್ಲಾಸ್ಟಿಕ್ ಬಳಸಬಾರದು. ಈಗಿನ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯಾಗುತ್ತಿದ್ದು, ಅವರ ದೈಹಿಕ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ. ಆದಕಾರಣ, ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಯನ್ನು ಮಾಡಲು ಶಿಕ್ಷಕರು ಹಾಗೂ ಪಾಲಕರು ಸಹಕರಿಸಬೇಕು. ತಾವು ಕಲಿತ ಶಾಲೆಗೆ, ಪಾಲಕರಿಗೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರನ್ನು ತರಬೇಕು ಎಂದು ಹೇಳಿದರು. ಈ ಶಾಲೆಯನ್ನು ಪ್ಲಾಸ್ಟಿಕ್‌ಮುಕ್ತ ಶಾಲೆಯನ್ನಾಗಿ ಮಾಡುವುದಾಗಿ ಹೇಳಿದರು.
ವಾರ್ಷಿಕ ವರದಿಯನ್ನು ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ಓದಿದರು. ಸಂಸ್ಥೆಯ ಉಪಾಧ್ಯಕ್ಷೆ ಮಂಗಲಾ ಅಂಗಡಿ, ಆಡಳಿತಾಧಿಕಾರಿ ರಾಜು ಜೋಶಿ, ಗಿರೀಶ ಕುಲಕರ್ಣಿ, ವಿನಾಯಕ ಜ್ಯೋತಿ, ಮಹಾದೇವ ಶಿರಗಾಂವಕರ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗ ಹಾಗೂ ಪಾಲಕರು ಉಪಸ್ಥಿತರಿದ್ದರು.
ಸ್ಕೂಲಿನ ವಾರ್ಷಿಕ ಬಹುಮಾನ ವರದಿಯನ್ನು ಶಿಕ್ಷಕಿಯರಾದ ಶೆರ್ಲಿ ಸಜು, ಪೂರ್ಣಿಮಾ ದೇಶಪಾಂಡೆ ಓದಿದರು. ಈ ಸಂದರ್ಭದಲ್ಲಿ ಕ್ರೀಡೆ, ಚಿತ್ರಕಲೆ, ಸಾಂಸ್ಕೃತಿಕ ಮುಂತಾದ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸ್ಕೂಲಿನ ಮಕ್ಕಳು ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಈ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಾದ ಪ್ರಣವ ಹಾಗೂ ತನುಶ್ರೀ ನಡೆಸಿಕೊಟ್ಟರು. ಲಕ್ಷ್ಮೀ ಸಾಂಗಲಿ ಸ್ವಾಗತಿಸಿದರು. ಜ್ಯೋತಿ ಕಾಂಬಳೆ ನಿರೂಪಿಸಿದರು. ಮಂಜುಳಾ ಪಿಲ್ಲೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ