ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಭಾರತೀಯ ವಾಯು ಸೇನೆಯಿಂದ ಪಾಕ್ ಆಕ್ರಮಿತ ಕಾಶ್ಮೀರನಲ್ಲಿ ಜೈಷ್-ಎ-ಮೊಹಮ್ಮದ ಉಗ್ರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ಮಾಡಿ ದ್ವಂಸಗೊಳಿಸಿದ ಕ್ರಮ ಸ್ವಾಗತಿಸಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಚವಾಟ್ ಗಲ್ಲಿಯ ಶಾಸಕರ ಕಚೇರಿ ಎದುರು ಪಟಾಕಿ, ಸಿಡಿಮದ್ದು ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ, ಕಳೆದ ೧೨ ದಿನಗಳ ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಹೇಡಿಗಳ ಹಾಗೆ ಆತ್ಮಾಹುತಿ ದಾಳಿ ನಡೆಸಿದ್ದರಿಂದ ೪೦ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಇಂದು ಬೆಳಗ್ಗೆ ಭಾರತೀಯ ವಾಯು ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜೈಶ್-ಎ-ಮೊಹಮ್ಮದ ಉಗ್ರ ಅಡಗುತಾಣಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದೆ. ಪಾಕಿಸ್ತಾನಕ್ಕೆ ಇದು ಒಂದು ಸಣ್ಣ ಎಚ್ಚರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಪಾಕ್ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸದಿದ್ದರೆ ಪ್ರಪಂಚದ ನಕ್ಷೆಯಲ್ಲಿ ಪಾಕಿಸ್ತಾನವೇ ಇರುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ವಾಯು ಸೇನೆಗೆ ದೇಶವಾಸಿಗಳ ಅಭಿನಂದನೆಗಳು. ಸೇನೆ ಹಾಗೂ ಭಾರತ ಸರಕಾರದ ಜೊತೆ ದೇಶದ ೧೩೦ ಕೋಟಿ ಜನತೆಯ ಬೆಂಬಲವಿದೆ ಎಂದು ತಿಳಿಸಿದರು.