Latest

ಬೆಂಗಳೂರಿನಲ್ಲಿ ನಾಳೆ ಮೋದಿ ‘ವಿಜಯ ಸಂಕಲ್ಪ’ ಸಮಾವೇಶ

ಅರಮನೆ ಮೈದಾನದಲ್ಲಿ ಬಿಜೆಪಿ ಮುಖಂಡರಿಂದ ಪೂರ್ವ ಸಿದ್ಧತೆಗಳ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಶನಿವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ವಿಜಯ ಸಂಕಲ್ಪ’ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಭೆಯ ಪೂರ್ವ ಸಿದ್ಧತೆಗಳನ್ನು, ವೇದಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಪಿ.ಮುರಳೀಧರ್ ರಾವ್, ಮಾಜಿ ಉಪಮುಖ್ಯಮಂತ್ರಿ  ಆರ್.ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ  ಅರವಿಂದ ಲಿಂಬಾವಳಿ, ರಾಜ್ಯಸಭಾ ಸದಸ್ಯ  ರಾಜೀವ್‍ ಚಂದ್ರಶೇಖರ್, ರಾಜ್ಯ ಬಿಜೆಪಿ ಖಜಾಂಚಿ  ಸುಬ್ಬಣ‍್ಣ, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಬಿಜೆಪಿ ಬೆಂಗಳೂರು ನಗರ ಜಿಲ್ಲೆ ಬಿಜೆಪಿ ಅಧ್ಯಕ್ಷ  ಮುನಿರಾಜು ಹಾಗೂ ಮತ್ತಿತರ ನಗರದ ಮುಖಂಡರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಅಶೋಕ್ ಅವರು, ಪ್ರಧಾನಮಂತ್ರಿ ಅವರ ಸಾರ್ವಜನಿಕ ಸಭೆ ಅಭೂತಪೂರ್ವ ಯಶಸ್ವಿಯಾಗಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಅರಮನೆ ಮೈದಾನ ಬಿಜೆಪಿಗೆ ಅದೃಷ್ಟದ ಮೈದಾನವೆನಿಸಿದೆ. 2014ರ ಚುನಾವಣೆಯಲ್ಲಿ ಇದೇ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಸಾರ್ವಜನಿಕ ಸಭೆ ಭಾರಿ ಯಶಸ್ವಿಯಾಗಿತ್ತು.  ಆ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿ ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಕಳೆದ ಬಾರಿಗಿಂತ ಈ ಬಾರಿ ಬೃಹತ್ ಸಾರ್ವಜನಿಕ ಸಭೆ ಅಭೂತಪೂರ್ವ ಯಶಸ್ವಿಯಾಗಲಿದೆ.   ಭ್ರಷ್ಟಾಚಾರ ರಹಿತ ನಾಯಕನನ್ನು ನೋಡಲು ಲಕ್ಷಾಂತರ ಜನರು ತಾವಾಗಿಯೇ ಭಾಗವಹಿಸುವುದರ ಮೂಲಕ ಬಿಜೆಪಿಯ ವಿಜಯದ ಪತಾಕೆ ಹಾರಿಸಲಿದ್ದಾರೆ ಎಂದು ಹೇಳಿದರು.
2 ಲಕ್ಷ ಜನರು ಸೇರುವ ಮೂಲಕ ನಾಳೆ ಜನರ ಹಬ್ಬ:
ನಾಳೆ ಸಂಜೆ 4.30ಕ್ಕೆ ಆರಂಭವಾಗುವ ‘ವಿಜಯಸಂಕಲ್ಪ’ ಯಾತ್ರೆಗೆ 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ವೇದಿಕೆಯನ್ನು ಅಚ್ಚುಕಟ್ಟಾಗಿ, ಸುಂದರವಾಗಿ ಸಜ್ಜುಗೊಳಿಸಲಾಗಿದೆ. 8 ಮೀಟರ್ ಎತ್ತರದ ವೇದಿಕೆಯಲ್ಲಿ 60*40 ಅಡಿ ಅಗಲ, 13 ಮೀಟರ್ ಎತ್ತರ ಬೃಹತ್‍ ಎಲ್‍ಇಡಿ ಪರದೆಯನ್ನು ಅಳವಡಿಸಲಾಗಿದೆ. ಹಾಗೆಯೇ ಜನರ ಅನುಕೂಲಕ್ಕಾಗಿ ಮೈದಾನದಲ್ಲಿ 11 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಆಸನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಆನ್‍ಲೈನ್‍ ಮೂಲಕ 11,000 ಮಂದಿ ನೋಂದಣಿ:
ನಾಳೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಆನ್‍ಲೈನ್‍ ಮೂಲಕ 11,000 ಮಂದಿ  ನೋಂದಣಿ ಮಾಡಿದ್ದಾರೆ. ಸಭೆಗೆ ಎಲ್ಲರಿಗೂ ಆಹ್ವಾನವಿದೆ. ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ 2 ಲಕ್ಷ ಮಂದಿ ಸಭೆಗೆ ಸಾಕ್ಷಿಯಾಗಲಿದ್ದಾರೆ ಎಂದು ಶ್ರೀ ಅಶೋಕ್‍ ತಿಳಿಸಿದ್ದಾರೆ.
ಮೈತ್ರಿ ಪಕ್ಷಗಳಿಂದ ಶಸ್ತ್ರತ್ಯಾಗ:
ಸಿದ್ದರಾಮಯ್ಯ, ಕುಮಾರಸ್ವಾಮಿ, ದಿನೇಶ್‍ ಗುಂಡೂರಾವ್‍ ಸೇರಿದಂತೆ ಮೈತ್ರಿ ಪಕ್ಷಗಳಾದ ಜೆಡಿಎಸ್‍-ಕಾಂಗ್ರೆಸ್‍ ಮುಖಂಡರು ಯುದ್ದಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡುವುದರ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ. ಚಕ್ರವ್ಯೂಹದೊಳಗೆ ಸಿಕ್ಕಿಬಿದ್ದಿದ್ದೇವೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗೆಲ್ಲುವುದು ಶತ:ಸಿದ್ಧ. ಕುಮಾರಸ್ವಾಮಿ ಅವರು ಸೋಲಿನ ಭೀತಿಯಿಂದ ತಾಳ್ಮೆಗೆಟ್ಟು ಹತಾಶರಾಗಿ ಮಾತನಾಡುತ್ತಿದ್ದಾರೆ. ಊಟಕ್ಕಿಲ್ಲದವರು ಸೇನೆಗೆ ಸೇರುತ್ತಾರೆ ಎಂದು ಹೇಳುವುದರ ಮೂಲಕ ದೇಶದ 130 ಕೋಟಿ ಜನರನ್ನು ಕಾಯುತ್ತಿರುವ ಸೈನಿಕರನ್ನು ಅಪಮಾನಿಸಿದ್ದಾರೆ. ಕುಮಾರಸ್ವಾಮಿ ಅವರು ಈ ಕೂಡಲೇ ಸೈನಿಕರ ಕ್ಷಮಾಪಣೆ ಕೇಳಬೇಕು ಎಂದು  ಆರ್. ಅಶೋಕ್‍ ಆಗ್ರಹಿಸಿದರು.
ರಾಜ್ಯದಲ್ಲಿ ಜೆಡಿಎಸ್‍-ಕಾಂಗ್ರೆಸ್‍ ವಿರೋಧಿ ಅಲೆ:
ರಾಜ್ಯದಲ್ಲಿ ಆಡಳಿತಾರೂಢ ಜೆಡಿಎಸ್‍-ಕಾಂಗ್ರೆಸ್ ಅಲೆ ಎದ್ದಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ 45,000 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 240 ದಿನ ಕಳೆದರೂ ಮನ್ನಾ ಮಾಡಿಲ್ಲ. ಕಾಮಗಾರಿಗಳು ಮುಗಿಯವ ಮುನ್ನವೇ ಸಾವಿರಾರು ಕೋಟಿ ರೂ. ಮೊತ್ತದ ಬಿಲ್‍ಗಳು ಮಂಜೂರಾಗುತ್ತಿವೆ. ಜನರ ಪಾಲಿಗೆ ಸಮ್ಮಿಶ್ರ ಸರ್ಕಾರ ಸತ್ತು ಹೋಗಿದೆ. ಜನರು ಮೈತ್ರಿ ಪಕ್ಷಗಳ ಚುನಾವಣಾ ಹೊಂದಾಣಿಕೆಯನ್ನು ಒಪ್ಪಿಕೊಂಡಿಲ್ಲ. ಎಲ್ಲ ಕಡೆ ಎರಡೂ ಪಕ್ಷಗಳ ಕಾರ್ಯಕರ್ತರು, ನಾಯಕರು ಹೊಡೆದಾಟ, ಬಡಿದಾಟದಲ್ಲಿ ತೊಡಗಿದ್ದಾರೆ. ಎರಡೂ ಪಕ್ಷಗಳಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಅಶೋಕ ಹೇಳಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button