ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಸಚಿವ ಪುಟ್ಟರಾಜು ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಆದಾಯ ತೆರಿಗೆ ದಾಳಿ ವಿರೋಧಿಸಿ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಪ್ರತಿಭಟನೆಗೆ ರೆಡಿ ಆಗಿವೆ.
ಬೆಂಗಳೂರಿನ ಐಟಿ ಕಚೇರಿ ಎದುರು ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಹಾಗೂ ಎರಡೂ ಪಕ್ಷಗಳ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಕಾಂಗ್ರೆಸ್, ಜೆಡಿಎಸ್ ಗುರಿ ಮಾಡಿಕೊಂಡು ದಾಳಿ ನಡೆಸಲಾಗುತ್ತಿದೆ. ಬಿಜೆಪಿಯ ಯಾರೊಬ್ಬರ ಮೇಲೂ ದಾಳಿ ಮಾಡುತ್ತಿಲ್ಲ ಎಂದು ದೋಸ್ತಿ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಪ್ರತಿಭಟನೆಗೆ ಸಾವಿರಾರು ಜನ ಅಲ್ಲಿ ಸೇರುತ್ತಿದ್ದು, ಪೊಲೀಸರು ಭಾರೀ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದೇ ವೇಳೆ ಐಟಿ ಇಲಾಖೆ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ನಾವು ನಮ್ಮದೇ ಆದ ಮೂಲಗಳಿಂದ ಮಾಹಿತಿ ಪಡೆದು ದಾಳಿ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಮ್ಮದು ಸ್ವತಂತ್ರ ನಿರ್ಧಾರವಾಗಿದ್ದು, ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ. ತನಿಖೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದೆ.
ವಿರೋಧ ಪಕ್ಷದ ಮೇಲೆ ಕೇಂದ್ರ ಸರಕಾರ ಟಾರ್ಗೆಟ್ ಮಾಡುತ್ತಿದ್ದು, ಹಾಗೆ ಮಾಡಿದರೆ ಪಶ್ಚಿಮಬಂಗಾಳದ ರೀತಿಯಲ್ಲೇ ಪ್ರತಿಭಟನೆ ಮಾಡುತ್ತೇವೆ ಎಂದು ನಿನ್ನೆಯೇ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ