ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಮ್ಮುವಿನಲ್ಲಿ ಆಲ್ ಜಮ್ಮು ಮತ್ತು ಕಾಶ್ಮೀರ ಚೆಸ್ ಸಂಸ್ಥೆ, ಅಖಿಲ ಭಾರತ ಚದುರಂಗ ಸಂಸ್ಥೆಯ ಆಶ್ರಯದಲ್ಲಿ ನಡೆಸಿದ ರಾಷ್ಟ್ರೀಯ ಹಿರಿಯರ ಚದುರಂಗ ಚ್ಯಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಬೆಳಗಾವಿಯ ನಿರಂಜನ ನವಲಗುಂದ ಕರ್ನಾಟಕವನ್ನು ಪ್ರತಿನಿಧಿಸಿ 13 ಸುತ್ತಿನ ಸ್ವಿಸ್ ಲೀಗ್ ಆಟದಲ್ಲಿ 8.5 ಗುಣಗಳನ್ನು ಗಳಿಸಿ ತನ್ನ ಅಂತರ ರಾಷ್ಟ್ರೀಯ ಮಾಸ್ಟರ 2ನೇ ನಾರ್ಮ ಪಡೆದು ಉತ್ತಮ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ನಿರಂಜನ ಇಬ್ಬರು ಗ್ರ್ಯಾಂಡ್ ಮಾಸ್ಟರಗಳೊಂದಿಗೆ ಮತ್ತು ಇಬ್ಬರು ಇಂಟರನ್ಯಾಶನಲ್ ಮಾಸ್ಟರಗಳೊಂದಿಗೆ ಗೆಲುವು ಸಾಧಿಸಿದರೆ, ಇಬ್ಬರು ಗ್ರ್ಯಾಂಡ್ ಮಾಸ್ಟರ್ಸ್ ಮತ್ತು ಇಬ್ಬರು ಇಂಟರನ್ಯಾಶನಲ್ ಮಾಸ್ಟರ್ಸ್ ಅವರೊಂದಿಗೆ ಡ್ರಾ ಮಾಡಿಕೊಂಡು ಸಮ ಅಂಕಗಳನ್ನು ಪಡೆದು ಒಟ್ಟು 87 ರೇಟಿಂಗ್ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ನಿರಂಜನ ನವಲಗುಂದ ಒಂದು ಗ್ರ್ಯಾಂಡ ಮಾಸ್ಟರ ನಾರ್ಮ ಸಹ ಹೊಂದಿದ್ದಾರೆ.
ಒಟ್ಟು 19 ಗ್ರ್ಯಾಂಡ ಮಾಸ್ಟರ್, 20 ಇಂಟರನ್ಯಾಶನಲ್ ಮಾಸ್ಟರ್ಸ್ ಒಳಗೊಂಡಂತೆ ವಿವಿಧ ರಾಜ್ಯಗಳಿಂದ ಒಟ್ಟು 162 ಚದುರಂಗ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಮಿಳುನಾಡಿನ ಅರವಿಂದ ಚಿದಂಬರಮ್ ಈ ಸ್ಪರ್ಧೆಯ ವಿಜೇತರಾಗಿದ್ದು ನಿರಂಜನ 18ನೇ ಸ್ಥಾನವನ್ನು ಪಡೆದಿರುತ್ತಾರೆ. ಪ್ರಸ್ತುತ ನಿರಂಜನ ಚನ್ನೈನ ವಿಶ್ವೇಶ್ವರನ್ ಅವರಲ್ಲಿ ಚದುರಂಗದಲ್ಲಿ ಉನ್ನತ ಮಟ್ಟದ ತರಬೇತಿ ಪಡೆಯುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮಿರದ ಹಣಕಾಸು ಪ್ರಧಾನ ಕಾರ್ಯದರ್ಶಿ ನವೀನಕುಮಾರ ಚೌಧರಿ ಅವರು ಇಂಟರನ್ಯಾಶನಲ್ ನಾರ್ಮ ಪ್ರಶಸ್ತಿ ಪತ್ರವನ್ನು ನಿರಂಜನ ನವಲಗುಂದ ಅವರಿಗೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ