ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಒಂದು ಕಾಲಕ್ಕೆ ಬೆಳಗಾವಿಯನ್ನೇ ಆಳಿದ್ದ, ಪ್ರಸ್ತುತ ಜಿಲ್ಲಾಡಳಿತ ಮತ್ತು ರಾಜ್ಯಾಡಳಿತವನ್ನು ಕೈಯಲ್ಲಿಟ್ಟುಕೊಂಡಿರುವ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಈ ಲೋಕಸಭಾ ಚುನಾವಣೆಯಲ್ಲಿ ಇಂತಹ ದುರ್ಗತಿ ಬರುತ್ತದೆ ಎಂದು ಸ್ವತಃ ಪಕ್ಷದ ನಾಯಕರೇ ಯೋಚಿಸಿರಲಿಕ್ಕಿಲ್ಲ.
ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆ ನಡುಕ ಹುಟ್ಟಿದೆ. ಅಭ್ಯರ್ಥಿಗಳಿಗಾಗಿ ತಡಕಾಡಿ, ಅಂತೂ ಲೆಕ್ಕಾಚಾರವೇ ಇಲ್ಲದೆ, ಚರ್ಚೆಯೂ ಇಲ್ಲದೆ ಅಂತಿಮಗೊಳಿಸಬೇಕಾದ ಅನಿವಾರ್ಯತೆ ಪಕ್ಷಕ್ಕೆ ಬಂದಿದೆ.
ಬೆಳಗಾವಿ ಕ್ಷೇತ್ರಕ್ಕೆ ವಿವೇಕರಾವ್ ಪಾಟೀಲ, ನಾಗರಾಜ ಯಾದವ, ಅಂಜಲಿ ನಿಂಬಾಳಕರ್, ರಮೇಶ ಜಾರಕಿಹೊಳಿ ಮೊದಲಾದ ಲಿಂಗಾಯತೇತರರ ಹೆಸರು ಮತ್ತು ಶಿವಕಾಂತ ಸಿದ್ನಾಳ, ಚನ್ನರಾಜ ಹಟ್ಟಿಹೊಳಿ, ಅಶೋಕ ಪಟ್ಟಣ ಮೊದಲಾದ ಲಿಂಗಾಯತ ಅಭ್ಯರ್ಥಿಗಳ ಹೆಸರು ಕೇಳಿ ಬಂದಿತ್ತು.
ರಮೇಶ ಜಾರಕಿಹೊಳಿ, ವಿವೇಕರಾವ್ ಪಾಟೀಲ ಪರವಾಗಿ ನಿಂತಿದ್ದರು. ಸತೀಶ್ ಜಾರಕಿಹೊಳಿ ಅಂಜಲಿ ನಿಂಬಾಳಕರ್ ಪರವಾಗಿದ್ದರು. ನಾಗರಾಜ ಯಾದವ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದಿದ್ದರು. ಆದರೆ, ಯಾವುದೇ ಚರ್ಚೆಯನ್ನೇ ಮಾಡದೆ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಸಬೇಕೆನ್ನುವ ಒಂದು ನಿಮಿಷದ ತೀರ್ಮಾನ ಪಕ್ಷಕ್ಕೆ ದೊಡ್ಡ ಹೊಡೆತ ನೀಡುವ ಲಕ್ಷಣ ಕಾಣುತ್ತಿದೆ.
ಜಾರಕಿಹೊಳಿ ವರ್ಸಸ್ ಹೆಬ್ಬಾಳಕರ್
ಕಾಂಗ್ರೆಸ್ ನಲ್ಲಿ ಲಕ್ಷ್ಮಿ ಹೆಬ್ಬಾಳಕರ್ ವರ್ಸಸ್ ಜಾರಕಿಹೊಳಿ ಸೋಹದರರು ಎನ್ನುವ ವಿವಾದ ಇನ್ನೂ ಬಗೆಹರಿದಿಲ್ಲ ಎನ್ನುವುದಕ್ಕೆ ಈ ಬಾರಿಯ ಟಿಕೆಟ್ ಹಂಚಿಕೆ ಪ್ರಕ್ರಿಯೆ ಸಾಕ್ಷಿಯಾಯಿತು. ಲಿಂಗಾಯತೇತರರನ್ನು ಕಣಕ್ಕಿಳಿಸಲು ಮುಂದಾದರೆ ಎರಡೂ ಗುಂಪಿನ ಜಗಳವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಏಕೈಕ ಕಾರಣಕ್ಕೆ ಲಿಂಗಾಯತ ಅಭ್ಯರ್ಥಿಯ ಹೆಸರನ್ನು ಮಾತ್ರ ಪರಿಗಣಿಸಲು ಪಕ್ಷ ನಿರ್ಧರಿಸಿತು.
ಕಾಂಗ್ರೆಸ್ ನಿಂದ ಲಿಂಗಾಯತ ಆಕಾಂಕ್ಷಿಗಳ ಹೆಸರು ಮಾತ್ರ ಚರ್ಚೆ
ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿ ಸುರೇಶ ಅಂಗಡಿ ಕಣಕ್ಕಿಳಿಯಲಿದ್ದಾರೆ. ಕ್ಷೇತ್ರದಲ್ಲಿ ಸುಮಾರು 4.50 ಲಕ್ಷ ಲಿಂಗಾಯತ ಮಗಳು ಮತ್ತು 12 ಲಕ್ಷದಷ್ಟು ಲಿಂಗಾಯತೇತರ ಮತಗಳಿವೆ. ಈ ಹಿಂದೆ ಒಂದು ಬಾರಿ ಕಾಂಗ್ರೆಸ್ ನಿಂದ ಕುರುಬ ಸಮಾಜದ ಅಮರಸಿಂಹ ಪಾಟೀಲ ಗೆದ್ದು ಬಂದಿದ್ದರು. ಉಳಿದಂತೆ ಬಹುತೇಕ ಅವಧಿಯಲ್ಲಿ ಲಿಂಗಾಯತರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಇದೀಗ ರಮೇಶ ಜಾರಕಿಹೊಳಿ ಮತ್ತೆ ಸಿಡಿದೆದ್ದಿದ್ದಾರೆ. ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ತಮಗೆ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ, ನಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮಾತ್ರ ನಾವು ಪಕ್ಷದ ಪರವಾಗಿ ಕೆಲಸಮಾಡುತ್ತೇವೆ. ಇಲ್ಲವಾದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ರಮೇಶ ಖಡಕ್ಕಾಗಿ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ತಮ್ಮ ,ಹೋದರ ಚನ್ನರಾಜ ಹೆಸರು ತೇಲಿಬಿಟ್ಟಿದ್ದರೂ ಅವರು ಈ ಚುನಾವಣೆಯ ಮೇಲೆ ಕಣ್ಣಿಟ್ಟಿರಲಿಲ್ಲ. ಒಟ್ಟಾರೆ ಲಿಂಗಾಯತರು ಅಭ್ಯರ್ಥಿಯಾಗಬೇಕು ಎನ್ನುವುದಷ್ಟೆ ಅವರ ಆಶಯವಾಗಿತ್ತು. ಇದರಿಂದಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಗೆಲುವು ಸಾಧಿಸಿದ ಸಮಾಧಾನ ಅವರದ್ದು.
ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಸಭೆಯಲ್ಲಿ ಚರ್ಚಿಸದೇ ಕೇವಲ ಒಂದೇ ನಿಮಿಷದಲ್ಲಿ ತೆಗೆದುಕೊಂಡ ತೀರ್ಮಾನ ದೊಡ್ಡಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ. ಕೊನೆಯ ಪಕ್ಷ ಚರ್ಚೆ ಮಾಡಿ ಅಂತಿಮಗೊಳಿಸಬೇಕಿತ್ತು ಎಂದು ಅನೇಕರು ಹೈಕಮಾಂಡ್ ಗೆ ದೂರು ಸಲ್ಲಿಸಿದ್ದಾರೆ.
ಈ ಬೆಳವಣಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಯಾವರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಪಕ್ಷ ಇದಕ್ಕೆಲ್ಲ ತೇಪೆ ಹಚ್ಚಲು ಯಶಸ್ವಿಯಾಗುವುದೋ ವಿವಾದ ವಿಕೋಪಕ್ಕೆ ಹೋಗಿ ಸುರೇಶ ಅಂಗಡಿಗೆ ವರವಾಗುವುದೋ ಕಾದು ನೋಡಬೇಕಿದೆ.
ಚಿಕ್ಕೋಡಿಯದ್ದು ಮತ್ತೊಂದು ಕತೆ
ಇದೇ ವೇಳೆ ಚಿಕ್ಕೋಡಿ ಕ್ಷೇತ್ರದಲ್ಲಿ ಕೂಡ ಹಾಲಿ ಸಂಸದ ಪ್ರಕಾಶ ಹುಕ್ಕೇರಿಗೆ ಪಕ್ಷದ ಶಾಸಕರದ್ದೇ ವಿರೋಧ ಎದುರಾಯಿತು. ಅಥಣಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹುಕ್ಕೇರಿಯನ್ನು ತರಾಟೆಗೆ ತೆಗೆದುಕೊಂಡರು. ಸಂಸದರು ಯಾವ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ತಮ್ಮ ಕ್ಷೇತ್ರವನ್ನು ಕೇವಲ ಚಿಕ್ಕೋಡಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಬೇರೆ ತಾಲೂಕುಗಳ ಕಡೆ ಲಕ್ಷ್ಯವನ್ನೇ ಹರಿಸಿಲ್ಲ. ಹಾಗಾಗಿ ನಾವ್ಯಾರೂ ಸಹಕಾರ ನೀಡಲು ಸಾಧ್ಯವಿಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದರು.
ಇದರಿಂದ ಕಂಗಾಲಾದ ಪ್ರಕಾಶ ಹುಕ್ಕೇರಿ ಮೀಟಿಂಗ್ ನಿಂದಲೇ ಹೊರನಡೆದರು. ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ಕೊಡುವಂತೆ ಅವರು ಒಂದು ಹಂತದಲ್ಲಿ ಪಕ್ಷದ ನಾಯಕರನ್ನು ವಿನಂತಿಸಿದರು. ಆದರೆ ಅದಕಕೆ ಸೊಪ್ಪು ಹಾಕದ ಹೈಕಮಾಂಡ್ ಚಿಕ್ಕೋಡಿಗೆ ಅವರ ಹೆಸರನ್ನೇ ಅಂತಿಮಗೊಳಿಸಿದೆ. ಆದರೆ ಪ್ರಕಾಶ ಹುಕ್ಕೇರಿ ಸ್ಪರ್ಧಿಸುತ್ತಾರೋ… ಹಿಂದೆ ಸರಿಯುತ್ತಾರೆ ಎನ್ನುವ ಕುತೂಹಲ ಹಾಗೆಯೇ ಉಳಿದುಕೊಂಡಿದೆ.
ಒಟ್ಟಾರೆ ದೊಡ್ಡ ಜಿಲ್ಲೆ ಬೆಳಗಾವಿ ಸದಾ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆ ನೋವಿನ ಜಿಲ್ಲೆಯಾಗಿ ಪರಿಣಮಿಸಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಮತ್ತು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)