Latest

ಬೆಳೆ ಸಾಲ ಮನ್ನಾ ಸದನದಲ್ಲಿ ಪ್ರತ್ಯೇಕ ಚರ್ಚೆ


   ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಯೋಜನೆ ಪ್ರಗತಿ ಕುರಿತಂತೆ ಸದನದಲ್ಲಿ ಅರ್ಧ ತಾಸು ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ವಿಧಾನ ಸಭೆಯ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಬುಧವಾರ ಸದನದಲ್ಲಿ ಪ್ರಕಟಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕೆ. ಜಿ. ಬೋಪಯ್ಯ ಅವರ ಪ್ರಶ್ನೆಗೆ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ ಅವರು ಉತ್ತರಿಸುವ ವೇಳೆಯಲ್ಲಿ ಪ್ರತಿಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಶಾಸಕರು ಸಾಲ ಮನ್ನಾ ಯೋಜನೆ ಸಮಪರ್ಕವಾಗಿ ಅನುಷ್ಠಾನವಾಗುತ್ತಿಲ್ಲ. ರೈತರಿಗೆ ಸರ್ಕಾರ ಕೇಳಿರುವ ದಾಖಲೆಗಳನ್ನು ಪೂರೈಸಲು ಸಮಯ ಅವಕಾಶ ಬೇಕಾಗಿದೆ ಕೇವಲ ಪ್ರಚಾರಕ್ಕಾಗಿ ಸಾಲ ಮನ್ನಾ ಎನ್ನಲಾಗುತ್ತಿದೆ ಸಾಲ ಮನ್ನಾವಾದ ಬಗ್ಗೆ ಯಾವ ರೈತರಿಗೂ ಋಣಮುಕ್ತ ಪ್ರಮಾಣ ಪತ್ರ ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಚರ್ಚೆಗೆ ಮುಂದಾದರು. ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಮೇಶ್ ಕುಮಾರ್ ಅವರು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ಬಹುಸಂಖ್ಯೆಯ ಶಾಸಕರು ಉಪಪ್ರಶ್ನೆ ಕೇಳಲು ಆಸಕ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಅರ್ಧ ಗಂಟೆ ಚರ್ಚೆಗೆ ಕಾಲಾವಕಾಶ ನೀಡುವುದಾಗಿ ಪ್ರಕಟಿಸಿದರು.
ಶಾಸಕರ ಹಕ್ಕುಗಳಿಗೆ ಚ್ಯುತಿ ಆಗದಿರಲಿ:
ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಅವಮಾನವಾಗದಂತೆ ಹಾಗೂ ಅವರ ಶಾಸನಬದ್ಧ ಹಕ್ಕುಗಳಿಗೆ ಚ್ಯುತಿ ಆಗದಂತೆ ಸೂಕ್ತ ಕ್ರಮ ವಹಿಸುವಂತೆ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಧಾನಸಭೆ ಶೂನ್ಯ ವೇಳೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಗೆ ಅವಮಾನವಾಗುವ ರೀತಿಯಲ್ಲಿ ನಡೆಸಿಕೊಳ್ಳಲಾಯಿತು ಎಂದು ಸದನದ ಗಮನಕ್ಕೆ ತಂದರು.
ಈ ಮಧ್ಯೆ ಸದನದ ಕೆಲವು ಸದಸ್ಯರು, ಜನಪ್ರತಿನಿಧಿಗಳಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೌರವ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅವರು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರಿಗೆ ಗೌರವ ಸಿಗಬೇಕು. ಸಮಸ್ಯೆ ಇರುವಂತಹ ಕಾರ್ಯಕ್ರಮಗಳಿಗೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸುವಂತೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಸಲಹೆ ನೀಡಿದರು. ಅಲ್ಲದೆ, ಚುನಾಯಿತ ಪ್ರತಿನಿಧಿಗಳ ಶಾಸನ ಬದ್ಧ ಹಕ್ಕುಗಳಿಗೆ ಚ್ಯುತಿ ಆಗಬಾರದು. ಸರ್ಕಾರದ ಕಾರ್ಯಕ್ರಮಗಳಲ್ಲಿ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗೌರವಗಳು ಸಿಗಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button