ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬಸವಣ್ಣನವರು ಕಾಯಕವನ್ನು ಅನುಭಾವದೆತ್ತರಕೆ ಬೆಳೆಸಿದ ಮಹಾತ್ಮರು. ಬಸವಣ್ಣನವರ ವಿಚಾರಗಳು ಭಾರತೀಯ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ಇದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲಸ ಮಾಡಿದಾಗ ಮಾತ್ರ ನಾವು ಮುಂದೆ ಬರಲಿಕ್ಕೆ ಸಾಧ್ಯ. ಕೆಲಸಕ್ಕೆ ಕಾಯಕದ ಆಧ್ಯಾತ್ಮದ ಲೇಪನೆಯನ್ನು ಕೊಟ್ಟು ಕೆಲಸವು ಕೂಡ ಪವಿತ್ರ ಎಂಬುದನ್ನ ತೋರಿಸಿದವರು ಬಸವಣ್ಣನವರು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೆಳಗಾವಿಯ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಜರುಗಿದ ಮಾಸಿಕ ಸುವಿಚಾರ ಚಿಂತನ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರ ವಿಚಾರಧಾರೆಯನ್ನು ನಾವು ಒಪ್ಪಿದರೆ ಭಾರತ ಸದೃಢವಾಗುತ್ತದೆ. ಆರ್ಥಿಕವಾಗಿ ಸುಭದ್ರತೆಯನ್ನು ತಾಳುತ್ತದೆ. ಅದಕ್ಕಾಗಿ ಬಸವಣ್ಣನವರ ವಿಚಾರವನ್ನು ಹೇಳುವ ಮುನ್ನ ನಾವು ಆಲೋಚಿಸುವ ಅವಶ್ಯಕತೆ ಇದೆ. ನಾವು ಭ್ರಷ್ಟಾಚಾರದಿಂದ ಮುಕ್ತರಾಗಿ ಈ ದೇಶವನ್ನು ಕಟ್ಟಿ ಬೆಳೆಸಿದರೆ ಖಂಡಿತವಾಗಿ ಭಾರತ ವಿಶ್ವಗುರು ಆಗುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಬಸವಣ್ಣನವರ ವಿಚಾರವನ್ನು ಪರಿಪಾಲಿಸುವುದು ಅವಶ್ಯ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ 200 ಜನರಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ನೀಡಿದ ಶಿರಸಿಯ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಯ ಡಾ. ವೆಂಕಟ್ರಮಣ ಹೆಗಡೆ ಅವರು ಮಾತನಾಡಿ, ಇವತ್ತು ಬಸವಣ್ಣನವರ ಕುರಿತಾಗಿ ಕೇವಲ ಉಪನ್ಯಾಸವನ್ನು ಮಾತ್ರ ಶ್ರೀಮಠ ಏರ್ಪಡಿಸಿಲ್ಲ. ಬಸವಣ್ಣನವರು ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡುವುದರಲ್ಲಿ ವಿಶೇಷವಾದ ಪಾತ್ರವನ್ನು ವಹಿಸಿದ್ದಾರೆ. ಅದಕ್ಕಾಗಿ ಇವತ್ತು ಸುಮಾರು 200 ಜನರಿಗೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸುವುದರ ಮುಖಾಂತರ ಆದರ್ಶದ ಹಾದಿಯನ್ನು ತೋರಿಸಿದ್ದಾರೆ. ನಿಸರ್ಗ ದತ್ತವಾಗಿ ಬಂದಿರುವ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಹುಕ್ಕೇರಿ ರೀಡ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಪಾಟೀಲ್ ಅವರು ಮಾತನಾಡಿ, ಹುಕ್ಕೇರಿ ಹಿರೇಮಠ ಸರ್ವ ಜನಾಂಗದವರಿಗೂ ಆದರ್ಶದ ಮಠವಾಗಿ ಹೊರಹೊಮ್ಮಿದೆ. ಇವತ್ತು ಬೆಳಗಾವಿ ನಗರದಲ್ಲಿ ನಮ್ಮ ಮಠ ಬೆಳೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.
ಹಾಗೆಯೇ ಈ ಕಾರ್ಯಕ್ರಮದಲ್ಲಿ ಅಮೇರಿಕಾದ ಡಾ. ಪ್ರವೀಣ್ ಅವರು ಆರೋಗ್ಯ ಕುರಿತು ಅನೇಕ ವಿಚಾರವನ್ನು ತಮ್ಮ ಉಪನ್ಯಾಸದಲ್ಲಿ ಹೇಳಿದರು. ನಿಸರ್ಗ ಮನೆಯ ಡಾ. ಕಾವ್ಯ, ಡಾ. ಮಮತಾ ಅವರು ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿದರು. ಡಾ.ಸೋನಾಲಿ ಸರ್ನೋಬತ್, ಡಾ. ಮೀನಾಕ್ಷಿ ಪಕೀರ ಗೌಡ ಪಾಟೀಲ್, ಬಸಪ್ಪ ಬಿ ಚಂದರಗಿ ಇವರು ದಾಸೋಹ ಸೇವೆಯನ್ನು ಮಾಡಿರುವ ಪ್ರಯುಕ್ತ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿರುಪಾಕ್ಷಯ್ಯ ನೀರಲಗಿಮಠ ಅವರು ಮಾಡಿದರು. ಆರಂಭದಲ್ಲಿ ವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು ವೇದಘೋಷವನ್ನು ನೆರವೇರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ