ಪ್ರಗತಿವಾಹಿನಿ ಸುದ್ದಿ, ತುಮಕೂರು :
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ತೀವ್ರ ಮುಖಭಂಗವಾಗಿದೆ. ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಿನಿಂದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರಿಗೆ ಬಿಜೆಪಿ ಅಭ್ಯರ್ಥಿ ಬಸವರಾಜು ಸೋಲುಣಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಸವರಾಜು ಅವರ ಎದುರು ದೇವೇಗೌಡ ಅವರು 15 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ದೇವೇಗೌಡರ ಹಠ ಮತ್ತು ಕಾಂಗ್ರೆಸ್ ಮುಖಂಡರ ಅಸಮಾಧಾನ ಅವರ ಸೋಲಿಗೆ ನೇರ ಕಾರಣವಾಗಿದೆ.
ಆರಂಭದ ಕೆಲವು ಸುತ್ತುಗಳಲ್ಲಿ ಮಾತ್ರ ದೇವೇಗೌಡ ಅವರು ಮುನ್ನಡೆ ಪಡೆದಿದ್ದರು. ಬಳಿಕ ಪ್ರತಿ ಹಂತದಲ್ಲಿಯೂ ಜಿ.ಎಸ್. ಬಸವರಾಜು ಅವರು ಮುನ್ನಡೆ ಕಾಯ್ದುಕೊಂಡರು. ಈ ಸೋಲಿನಿಂದ ಮತ್ತೊಮ್ಮೆ ಸಂಸತ್ ಪ್ರವೇಶಿಸುವ ಕನಸು ಕಂಡಿದ್ದ ದೇವೇಗೌಡರಿಗೆ ದೊಡ್ಡ ಸೋಲಾಗಿದೆ.
ಕಾಂಗ್ರೆಸ್‌ನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್, ಅನಿವಾರ್ಯವಾಗಿ ದೇವೇಗೌಡ ಅವರಿಗೆ ಬೆಂಬಲ ನೀಡಿತ್ತು
ದೇವೇಗೌಡರಿಗೆ ಮಣೆ ಹಾಕಿದ್ದು ಮುದ್ದಹನುಮೇಗೌಡ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ಮುಂದಾಗಿದ್ದರು. ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಕೂಡ ಪಕ್ಷದ ವಿರುದ್ಧ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಬಳಿಕ ಇಬ್ಬರೂ ಮುಖಂಡರ ಮನವೊಲಿಸಿದ್ದ ಕಾಂಗ್ರೆಸ್, ಅವರ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವಂತೆ ಮನವೊಲಿಸುವಲ್ಲಿ ಮೇಲ್ನೋಟಕ್ಕೆ ಯಶಸ್ವಿಯಾಗಿದ್ದರು.
ಸುಮಾರು ಹತ್ತು ವರ್ಷಗಳ ಕಾಲ ಬಿಜೆಪಿ ತೆಕ್ಕೆಯಲ್ಲಿದ್ದ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುದ್ದಹನುಮೇಗೌಡ ‘ಕೈ’ವಶ ಮಾಡಿಕೊಂಡಿದ್ದರು. ಮಾಜಿ ಸಂಸದರಾಗಿದ್ದ ಜಿ.ಎಸ್. ಬಸವರಾಜು ಅವರ ವರ್ಚಸ್ಸು ಕುಂದಿದೆ ಎಂದೇ ಭಾವಿಸಲಾಗಿತ್ತು. ಆದರೆ, ಕಾಂಗ್ರೆಸ್‌ನ ಒಳಜಗಳ, ನಾಯಕರ ಅಸಮಾಧಾನ ಅವರಿಗೆ ಈ ಬಾರಿ ನೆರವಾಗಿದೆ. ಮುದ್ದಹನುಮೇಗೌಡ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಜಿ.ಎಸ್. ಬಸವರಾಜು ಅವರ ಗೆಲುವು ಸುಲಭವಾಗುತ್ತಿರಲಿಲ್ಲ
ಈ ಹಿಂದೆಯೂ ಲೋಕಸಭೆಯಲ್ಲಿ ಹಾಸನ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದರು. 1999ರ ಲೋಕಸಭೆ ಚುನಾವಣೆಯಲ್ಲಿ ಅವರು ಹಾಸನದಲ್ಲಿ ಸೋಲು ಕಂಡಿದ್ದರು. 2004ರಲ್ಲಿ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರನ್ನು ತೇಜಸ್ವಿನಿ ಶ್ರೀರಮೇಶ್ ಸೋಲಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ