17ಕ್ಕೆ ಬೆಳಗಾವಿಗೆ ಬರುತ್ತಾರೋ, ಇಲ್ಲವೋ? -ಗೊಂದಲ
ಪ್ರಗತಿವಾಹಿನಿ ಸುದ್ದಿ, ಲಕ್ನೋ:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಯೋಗಿ ಆದಿತ್ಯನಾಥ್‌ಗೆ 72 ಗಂಟೆ ಹಾಗೂ ಮಾಯಾವತಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕೋಮು ಭಾವನೆ ಕೆರಳುವ ಭಾಷಣ ಮಾಡಿದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6ರಿಂದ ಸೂಚನೆ ಜಾರಿಗೆ ಬರಲಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ನಿರ್ಬಂಧವಿಧಿಸಲಾಗಿದೆ.
ಮುಸ್ಲಿಮರಿಗೆ ಮತ ಹಾಕಿ ಎಂದು ಹೇಳಿರುವ ಕಾರಣಕ್ಕೆ ಮಾಯಾವತಿಗೆ ಹಾಗೂ ಅಲಿ, ಬಜರಂಗ ಬಲಿ ಕುರಿತ ಹೇಳಿಕೆಗೆ ಯೋಗಿ ಆದಿತ್ಯನಾಥ್‌ಗೆ ನೋಟಿಸ್ ನೀಡಲಾಗಿದೆ.
ಇದೇ 17ರಂದು ಆದಿತ್ಯನಾಥ ಬೆಳಗಾವಿಯಲ್ಲಿ ಚುನಾವಣೆ ಪ್ರಚಾರ ನಡೆಸುವವರಿದ್ದರು. ಅಂದು ಸಂಜೆ 5 ಗಂಟೆಗೆ ಶಹಾಪುರದ ಮಾಲಿನಿ ಪರಿಸರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಅವರ ಕಾರ್ಯಕ್ರಮದ ಕುರಿತು ಇದೀಗ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ.
“ನಾವು ಕಾರ್ಯಕ್ರಮದ ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಆದರೆ ಈಗ ಅವರು ಬರುತ್ತಾರೋ ಇಲ್ಲವೋ ಎನ್ನುವ ಕುರಿತು ಸ್ಪಷ್ಟನೆ ಕೇಳಿದ್ದೇವೆ” ಎಂದು ಕಾರ್ಯಕ್ರಮದ ಸಂಘಟಕರಾಗಿರುವ ಶಾಸಕ ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಏನಿದು ವಿವಾದ?
ಬಜರಂಗಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದರು. ರಾಮಾಯಣದ ಬಜರಂಗಬಲಿ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂದಿರುವ ಮಾಯಾವತಿ, ಬಜರಂಗಬಲಿಯನ್ನು ನನ್ನ ಸ್ವಂತ ದಲಿತ ಸಮುದಾಯಕ್ಕೆ ತಳುಕುಹಾಕಲಾಗಿದೆ. ಆದ್ದರಿಂದ ಬಜರಂಗಬಲಿ ನಮ್ಮವನೇ ಆಗಿದ್ದಾನೆ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಲಿ (ಮುಸ್ಲಿಂ ಸಮುದಾಯದ ಮತಗಳು) ಬಿಎಸ್ ಪಿ-ಸಮಾಜವಾದಿ ಪಕ್ಷ- ಆರ್ ಎಲ್ ಡಿ ಜೊತೆ ಇದ್ದರೆ, ಬಜರಂಗಬಲಿ (ಹಿಂದೂ ಸಮುದಾಯದ ಮತಗಳು) ಭಾರತೀಯ ಜನತಾ ಪಕ್ಷದೊಂದಿಗೆ ಇದೆ ಎಂದು ಹೇಳಿದ್ದರು. ಈಗ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಮಾಯಾವತಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಜರಂಗ ಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮಾಯಾವತಿ, ಯೋಗಿ ಆದಿತ್ಯನಾಥ್ ಇಬ್ಬರಿಗೂ ಚುನಾವಣಾ ಆಯೋಗ ನೊಟೀಸ್ ಜಾರಿಗೊಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ