ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಸಾಕಷ್ಟು ಕೊಟ್ಟಿದೆ. ಕಳೆದ 25 ವರ್ಷಗಳಿಂದ ಅವರು ಪಕ್ಷದಲ್ಲಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡುವಂತ ನಿರ್ಧಾರ ತೆಗದುಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ ಎಂದು ಕಾಗ್ರೆಸ್ ಮುಖಂಡ, ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಮ್ಮನೆ ಹೈಪ್ ಕ್ರಿಯೇಟ್ ಮಾಡ್ತಿದ್ದಾರೆ. ಚುನಾವಣೆಗೆ ಮೊದಲು ತಮ್ಮ ಸರ್ಕಾರ ಬರುತ್ತದೆ ಎಂಬ ರೀತಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಸೋನಿಯಾ, ಇಂದಿರಾಗಾಂಧಿ ಹೆಸರು ಹೇಳಿಕೊಂಡು ಟಿಕೇಟ್ ಪಡೆದುಕೊಂಡವರೆಲ್ಲ ಇದ್ದಾರೆ. ಅಂತವರೆಲ್ಲ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರ ನಮ್ಮಗಮನಕ್ಕೆ ಇನ್ನೂ ಬಂದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಸ್ಟ್ಯಾಟಜಿ ಕಮಿಟಿ ಸಭೆಯಲ್ಲಿ ತೀರ್ಮಾನ ಆಗಬೇಕು. ಬಹುಶಃ ರಾಹುಲ್ ಗಾಂಧಿ, ದೇವೇಗೌಡರ ನಡುವೆ ಮಾತುಕತೆ ನಡೆದಿರಬಹುದು. ಇನ್ನೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಖರ್ಗೆ ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಇಲ್ಲಿ ಸರಿಯೋ, ತಪ್ಪಿನ ಪ್ರಶ್ನೆ ಉದ್ಬವಿಸುವುದಿಲ್ಲ. ಅವರು 12 ಸ್ಥಾನ ಕೇಳುತ್ತಿದ್ದಾರೆ ಅನ್ನೋ ಬಗ್ಗೆ ಈಗಲೇ ಚರ್ಚೆ ಏಕೆ ? ಏನೋ ಮಾತನಾಡಿ ವಾತಾವರಣ ಕೆಡಿಸಿಕೊಳ್ಳೋದು ಬೇಡ. ಪ್ರತಿಯೊಬ್ಬರೂ ನಮಗಿಷ್ಟು ಬೇಕು ಎಂದು ಕೇಳುತ್ತಾರೆ. ಚರ್ಚೆಯ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಅದರ ಬಗ್ಗೆ ನಾನು ಹೇಳುವುದು ಸರಿಕಾಣುವುದಿಲ್ಲ. ಅವರ ಪಕ್ಷದ ಮುಖಂಡರಾಗಿ ಅವರು ಹೇಳ್ತಿದ್ದಾರೆ. ನಮ್ಮ ಪಕ್ಷ ಏನು ನಿರ್ಣಯ ತೆಗೆದುಕೊಳ್ಳಬೇಕು ನಾವು ಮಾಡ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಕಳೆದ 50 ವರ್ಷದಿಂದ ಕೇಳ್ತಾನೇ ಇದ್ದೇವೆ. ನಮ್ಮ ಪಕ್ಷದಲ್ಲಿ ಮಾಡುವುದು ನಮಗೆ ಬಿಟ್ಟಿದ್ದು. ಅವರ ಪಕ್ಷದ್ದು ಅವರಿಗೆ ಬಿಟ್ಟಿದ್ದು. ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಎಲ್ಲವೂ ಕೂಡಿಕೊಂಡೇ ಹೋಗಬೇಕು. ಈಗ ಚುನಾವಣೆ ಎದುರಿಸುವ ಕಡೆ ಗಮನ ಹರಿಸಿದ್ದೇವೆ ಎಂದರು ಖರ್ಗೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ