ಪ್ರಗತಿವಾಹಿನಿ ಸುದ್ದಿ, ಶಿರಸಿ:
ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಗಳಾಗಲಿ, ಅನಂತಕುಮಾರ ಹೆಗಡೆಯವರ ದಿಗ್ವಿಜಯ ಯಾತ್ರೆ ಮುಂದುವರೆಯಲಿ, ಜೊತೆಗೆ ರಾಜ್ಯದಲ್ಲಿ ಸ್ಥಿರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ರಾಘವೇಂದ್ರ ಮಠದಲ್ಲಿ ಅಭಯಂಕರ ದಿಗ್ವಿಜಯ ಹೋಮ ನಡೆಸಲಾಯಿತು.
ಶಿರಸಿ ನಗರ ಬಿಜೆಪಿ ಯುವಮೋರ್ಚಾ ಮತ್ತು ರಾಘವೇಂದ್ರ ಸರ್ಕಲ್ ಗೆಳೆಯರ ಬಳಗದಿಂದ ಏರ್ಪಡಿಸಲಾಗಿದ್ದ ಅಭಯಂಕರ ದಿಗ್ವಿಜಯ ಹೋಮದಲ್ಲಿ ಭಾರತೀಯ ಜನತಾ ಪಕ್ಷದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಗಳಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು. ಇನ್ನು ಈ ಯಜ್ಞದ ಪೂರ್ಣಾಹುತಿ ವೇಳೆ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಆಗಮಿಸಿ ಪೂರ್ಣಾಹುತಿ ನೆಡೆಸಿಕೊಟ್ಟರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮ್ನೆ ಇಲಿಯಂತಿರುವ ರಾಹುಲ್ ಗಾಂಧಿಯನ್ನು ಹುಲಿಯನ್ನಾಗಿ ಮಾಡಲು ಹೋಗಬೇಡಿ. ಇವತ್ತು ಇಡೀ ದೇಶದ ಜನ ಒಪ್ಪಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಎನ್ ಡಿ ಎ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಎಲ್ಲಾ ಮಾಧ್ಯಮಗಳು ಕೂಡಾ ಇದನ್ನೇ ಹೇಳುತ್ತಿವೆ. ಇದೇ ರೀತಿ ಸತ್ಯಕ್ಕೆ ಹತ್ತಿರವಾದ ವರದಿ ಮಾಡಿದ್ದಲ್ಲಿ ಮಾಧ್ಯಮಗಳ ಗೌರವ ಉಳಿಯುತ್ತದೆ ಅಂದರು.
ಜೊತೆಗೆ, ಒಮ್ಮೆ ನಡೆದಿರುವ ಮತದಾನವನ್ನು ಇನ್ನೊಮ್ಮೆ ಪರಿಶೀಲಿಸಲು ಸುಪ್ರೀಂಕೋರ್ಟ್ ಜಡ್ಜ್ಮೆಂಟ್ ನೀಡಿರುವ ವಿಚಾರ ತುಂಬಾ ಒಳ್ಳೇದು. ಮತ್ತೊಮ್ಮೆ ಪರಿಶೀಲಿಸಿ ಫಲಿತಾಂಶ ಘೋಷಣೆ ಮಾಡೋದು ಸ್ವಾಗತಾರ್ಹ. ಸುಪ್ರೀಂಕೋರ್ಟ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ