Latest

ಲೋಕಸಭಾ ಚುನಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಬಹಿರಂಗ ಪ್ರಚಾರಕ್ಕೆ ನಾಳೆ ಕೊನೆಯ ದಿನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಏಪ್ರಿಲ್ ೨೩ ರಂದು ಲೋಕಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಸಂಜೆಗೆ ಅಂತ್ಯಗೊಳ್ಳಲಿದೆ. ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ನಾಯಕರು ಸಂಜೆ 6 ಗಂಟೆಯೊಳಗೆ ಕ್ಷೇತ್ರ ತೊರೆಯುವುದು ಅನಿವಾರ್ಯ. 

Related Articles

ಇದರಿಂದಾಗಿ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಕೇಳುತ್ತಿದ್ದ ಚುನಾವಣೆ ಗದ್ದಲ ಅಂತ್ಯವಾಗಲಿದೆ. ಸೋಮವಾರ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. 

ಬೆಳಗಾವಿ ಕ್ಷೇತ್ರದಲ್ಲಿ ಒಟ್ಟೂ 57 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಜಿಲ್ಲೆಯಲ್ಲಿ ಒಟ್ಟು ೪೪೩೪ ಮತಗಟ್ಟೆಗಳಿದ್ದು, ಒಟ್ಟು ೩೭,೭೩,೯೯೦ ಮತದಾರರಿದ್ದು, ಈ ಪೈಕಿ ೧೯,೧೦,೭೩೧ ಪುರುಷ ಮತದಾರರು, ೧೮,೬೩,೧೩೩ ಮಹಿಳಾ ಮತದಾರರು ಮತ್ತು ೧೨೬ ಇತರ ಮತದಾರರು ಇದ್ದಾರೆ. ೨೪,೯೧೮ ದಿವ್ಯಾಂಗ ಮತದಾರರು ಹಾಗೂ ೧೮,೭೪೩ ಸೇವಾ ಮತದಾರರು ಇದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವಿಶಾಲ ಈ ಕುರಿತು ವಿವರ ನೀಡಿದ್ದಾರೆ.
ಮತದಾನ ದಿನದಂದು ಮತದಾರರು ನಿರ್ಭಯವಾಗಿ ಮತ ಚಲಾಯಿಸಲು ಅನುವಾಗುವಂತೆ, ಯಾವುದೇ ಅಕ್ರಮಗಳು ನಡೆಯದಂತೆ ಮತಗಟ್ಟೆಗಳಿಗೆ ಸಿಪಿಎಂಎಫ್, ವಿಡಿಯೋ ಕ್ಯಾಮಾರಾ, ವೆಬ್ ಕಾಸ್ಟಿಂಗ್ ಮೈಕ್ರೋ ಆಭಸರ್ವರ‍್ಸಗಳ ನೇಮಕಾತಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗುವುದು.
ಜಿಲ್ಲೆಯಲ್ಲಿ ೧೦೮ ಫ್ಲೈಯಿಂಗ್ ಸ್ಕ್ವಾಡ್ ಮತ್ತು ೫೬  ಸ್ಟ್ಯಾಟಿಕ್ ಸರ್ವೇಲನ್ಸ್ ಟೀಮ್ ಗಳನ್ನು ನೇಮಿಸಿದ್ದು, ಸದರಿ ತಂಡಗಳನ್ನು ಚುನಾವಣೆಯ ನಿಮಿತ್ಯ ಯಾವುದೇ ಅಕ್ರಮಗಳು ನಡೆಯದಂತೆ ನಿಗಾ ವಹಿಸುತ್ತವೆ.

ಸಿಬ್ಬಂದಿ ನೇಮಕಾತಿ:
೧೦ ರಿಂದ ೧೨ ಮತಗಟ್ಟೆಗೆ ಒಬ್ಬರಂತೆ ಒಟ್ಟು ೩೫೩ ಸೆಕ್ಟರ್ ಆಫೀಸರ‍್ಸ್ ಮತ್ತು ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳ ನೇಮಕಾತಿ ಮಾಡಲಾಗಿದೆ. ಅವರುಗಳು ಮತಗಟ್ಟೆ ಸಿಬ್ಬಂದಿ ಸುರಕ್ಷಿತವಾಗಿ ತಲುಪುವಲ್ಲಿ, ಮತದಾನ ಸಮಪರ್ಕವಾಗಿ ಜರುಗಿಸುವಲ್ಲಿ ಮತ್ತು ಮತದಾನ ನಂತರ ಮತಗಟ್ಟೆ ಸಿಬ್ಬಂದಿ ಸುರಕ್ಷಿತವಾಗಿ ಕೇಂದ್ರಸ್ಥಾನಕ್ಕೆ ತಲುಪುವಲ್ಲಿ ಸಹಕಾರಿಯಾಗುತ್ತಾರೆ. ದಿವ್ಯಾಂಗ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ, ವೀಲ್ ಚೇರ‍್ಸ್, ಅವಶ್ಯಕತೆಗನುಗುಣವಾಗಿ ಬ್ರೇಲ್ ಎಪಿಕ್, ಬ್ರೇಲ್ ಡಮ್ಮಿ ಬ್ಯಲೆಟ್ ಪೇಪರ್, ಬೂತಕನ್ನಡಿ ಪೂರೈಸಲಾಗುತ್ತಿದೆ. ದಿವ್ಯಾಂಗ ಮತದಾರರನ್ನು ಮತಗಟ್ಟೆಗೆ ಕರೆ ತರಲು ೧೮ ವರ್ಷ ಒಳಗಿನ ಸ್ವಯಂ ಸೇವಕರನ್ನು ಕೂಡ ನೇಮಿಸಲಾಗಿದೆ.
ಪ್ರತೀ ಮತಗಟ್ಟೆಗೆ ೦೧ ಮತಗಟ್ಟೆ ಅಧಿಕಾರಿ ಮತ್ತು ೦೩ ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಪ್ರತೀ ಮತಗಟ್ಟೆಗೆ ಒಬ್ಬ ಗ್ರೂಪ್ ಡಿ ನೌಕರರನ್ನು ನೇಮಿಸಲಾಗಿದೆ. ಅಲ್ಲದೇ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಸಿಬ್ಬಂದಿಗಳಿಗೆ ಅಂಚೆ ಮತಪತ್ರ:
ಚುನಾವಣೆ ಕೆಲಸದ ಮೇಲೆ ನಿಯೋಜಿತವಾಗಿ ಹೊರಗಿನ ಲೋಕಸಭಾ ಮತಕ್ಷೇತ್ರಕ್ಕೆ ನೇಮಿಸಲಾದ ಸಿಬ್ಬಂದಿಗಳಿಗೆ ಸಹ ಅಂಚೆ ಮತಪತ್ರಗಳನ್ನು ಕೊಡಲಾಗಿರುತ್ತದೆ. ಹಾಗೂ ಲೋಕಸಭಾ ಮತಕ್ಷೇತ್ರದ ಒಳಗೆ ನಿಯೋಜಿತವಾದ ಸಿಬ್ಬಂದಿಗೆ ಚುನಾವಣಾ ಕರ್ತವ್ಯ ಪ್ರಮಾಣಪತ್ರ ನೀಡಲಾಗಿರುತ್ತದೆ. ಆ ಮೂಲಕ ಅವರು ಸೇವೆಗೆ ನಿಯೋಜಿಸಲ್ಪಟ್ಟ ಮತಗಟ್ಟೆಯಲ್ಲಿಯೇ ಮತ ಚಲಾಯಿಸಲು ಅರ್ಹರಾಗುತ್ತಾರೆ.

ವಾಹನ ವ್ಯವಸ್ಥೆ:
ಮತಗಟ್ಟೆ ಸಿಬ್ಬಂದಿಯ ರವಾನೆ ಸಲುವಾಗಿ ಸಾರಿಗೆ ಸಂಸ್ಥೆಯ ೫೯೪ ಬಸ್‌ಗಳನ್ನು, ೧೪೨- ವಿವಿಧ ವಾಹನಗಳಾದ ಜೀಪ್, ಮ್ಯಾಕ್ಸಿ ಕ್ಯಾಬ್ ಮತ್ತು ಟ್ರಕ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಏಪ್ರಿಲ್ ೨೩ ರಂದು ಮುಕ್ತ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆ ಸಲುವಾಗಿ ಜಿಲ್ಲಾಡಳಿತದಿಂದ ಎಲ್ಲ ಪೂರ್ವಸಿದ್ಧತೆಗಳನ್ನು ಸುರಕ್ಷತಾ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಅರ್ಹ ಮತದಾರರಿಗೆ ಈ ಮೂಲಕ ಅರಿಕೆ ಮಾಡಿಕೊಳ್ಳವುದೇನೆಂದರೆ, ಮತದಾನದ ದಿನ ದಂದು ಮತದಾರರ ಗುರುತಿನ ಚೀಟಿಯನ್ನು ಮತದಾನ ಮಾಡಲು ತರಲು ಕೋರಿದೆ. ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಲ್ಲಿ, ಅದನ್ನು ತೋರಿಸಿ ಮತ ಚಲಾಯಿಸಬಹುದು ಅಥವಾ ಮತದಾರರ ಗುರುತಿನ ಚೀಟಿ ಲಭ್ಯವಿಲ್ಲದ ಪಕ್ಷದಲ್ಲಿ ಈ ಕೆಳಕಾಣಿಸಿದ ೧೧ ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ತೋರಿಸಿ ಮತ ಚಲಾಯಿಸಬಹುದು.

ದಾಖಲೆಗಳು:
ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಲಾದ ಛಾಯಾಚಿತ್ರಗಳೊಂದಿಗೆ ಸೇವೆಯ ಗುರುತಿನ ಚೀಟಿಗಳು, ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ಗಳು ನೀಡಿರುವ ಪಾಸ್‌ಬುಕ್, ಪ್ಯಾನ್ ಕಾರ್ಡ, ಆರ್‌ಜಿಐ ಅಥವಾ ಎನ್‌ಪಿಆರ್ ಮೂಲಕ ನೀಡಲಾಗಿರುವ ಸ್ಮಾರ್ಟ್ ಕಾರ್ಡ್, ಉದ್ಯೋಗ ಖಾತ್ರಿ ಗುರುತಿನ ಪತ್ರ, ಕರ್ಮಿಕ ಇಲಾಖೆಯಿಂದ ನೀಡಲಾಗಿರುವ ವಿಮಾಕಾರ್ಡ್‌ಗಳು, ಫೋಟೋ ಸಹಿತದ ಪಿಂಚಣಿ ಕಾರ್ಡ್, ಶಾಸಕರು, ಸಂಸದರು ನೀಡಿರುವ ಅಧಿಕೃತ ಗುರುತಿನ ಚೀಟಿ ಮತ್ತು ಆಧಾರ ಕಾರ್ಡ್‌ಗಳು.

ಮತದಾನಕ್ಕೆ  ಬರುವಾಗ ಮತದಾರರು ಗುರುತಿನ ಚೀಟಿ ಅಥವಾ ಮೇಲೆ ಕಾಣಿಸಿದ ಯಾವುದಾದರೂ ಒಂದು ದಾಖಲೆ ತೋರಿಸಿ ಮತ ಚಲಾಯಿಸಬಹುದಾಗಿದೆ. ಮತದಾರರು ಮತದಾನ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಮತದಾನದ ಸಮಯದಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುವುದು.

ಕ್ಯಾಂಪ್ ನಿಷೇಧ:
ಮತದಾನದ ದಿನದಂದು ಮತಗಟ್ಟೆಯಿಂದ ೧೦೦ ಮೀಟರುಗಳ ಒಳಗೆ ಪ್ರಚಾರ ಮಾಡುವುದು ಅಪರಾಧವಾಗುತ್ತದೆ. ಹಾಗೆ ಮಾಡುವ ಯಾರೇ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸಬಹುದು ಮತ್ತು ೧೯೫೧ರ ಜನತಾ ಪ್ರಾತಿನಿಧ್ಯ ಅಧಿನಿಯಮದ ೧೩೦ನೇ ಪ್ರಕರಣದ ಮೇರೆಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು. ಅದೇ ರೀತಿ ಆಯೋಗದ ನಿರ್ದೇಶನದಂತೆ, ಮತದಾನದ ದಿನ ಮತಗಟ್ಟೆಯಿಂದ ೨೦೦ ಮೀಟರಗಳ ಒಳಗೆ ಉಮೇದುವಾರರು ಯಾವುದೇ ಕ್ಯಾಂಪುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ ಮತ್ತು ಅಂತಹ ನಿರ್ದೇಶನಗಳನ್ನು ಉಲ್ಲಂಘಿಸಿ ಕ್ಯಾಂಪುಗಳನ್ನು ಹಾಕಿದರೆ ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ತೆಗೆದುಹಾಕುತ್ತಾರೆ.

ಮೊಬೈಲ್ ನಿಷೇಧ:
೧೯೫೧ರ ಜನತಾ ಪ್ರಾತಿನಿಧ್ಯ ಅಧಿನಿಯಮದ ೧೩೨ನೇ ಪ್ರಕರಣದ ಮೇರೆಗೆ ಪ್ರಿಸೈಡಿಂಗ್ ಅಧಿಕಾರಿಯು ಮತಗಟ್ಟೆಯ ಒಳಗೆ ಅನುಸರಿಸಬೇಕಾದ ಶಿಸ್ತಿನ ಕುರಿತು ನಿಯಮಗಳನ್ನು ರೂಪಿಸಲಾಗಿದ್ದು, ಅದರನ್ವಯ ಮತಗಟ್ಟೆಯ ಒಳಗೆ ಮೊಬೈಲ್ ಬಳಕೆಗೆ ನಿಷೇಧ ವಿಧಿಸಲಾಗಿದ್ದು, ಯಾವುದೇ ಮತದಾರರು ಮತಗಟ್ಟೆಯ ಒಳಗೆ ಮೊಬೈಲ್ ಬಳಕೆ ಮಾಡುವಂತಿಲ್ಲ.

ಮಧ್ಯ ಮಾರಾಟ ನಿಷೇಧ :
ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏಪ್ರಿಲ್ ೨೧ ರ ಸಂಜೆ ೬ ಗಂಟೆಯಿಂದ ಏಪ್ರಿಲ್ ೨೩ರ ಮಧ್ಯರಾತ್ರಿ ೧೨ ಗಂಟೆವರೆಗೆ ಹಾಗೂ ಮೇ ೨೩ ರಂದು ಮತ ಎಣಿಕೆ ದಿನ ಮಧ್ಯರಾತ್ರಿ ೧೨ ಗಂಟೆವರೆಗೆ ಜಿಲ್ಲೆಯಾಧ್ಯಂತ ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೧ರ ಕಲಂ ೧೩೫ ಸಿ ರನ್ವಯ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಏಪ್ರಿಲ್ ೨೧ ರಂದು ಸಂಜೆ ೬ ಗಂಟೆಯಿಂದ ಏಪ್ರಿಲ್ ೨೩ ಸಂಜೆ ೬ ರವರೆಗೆ ಪ್ರಜಾ ಪಾತಿನಿಧ್ಯ ಕಾಯ್ದೆ, ೧೯೫೧ರ ಕಲಂ ೧೨೬ರಲ್ಲಿ ನನ್ನಲ್ಲಿರುವ ಪ್ರದತ್ತವಾದ ಅಧಿಕಾರದ ಮೇರೆಗೆ, ಸಿಆರ್‌ಪಿಸಿ ೧೯೭೩ರ ಕಲಂ ೧೪೪(೨) ಅಡಿ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಮೆರವಣಿಗೆ ನಿಷೇಧಿಸಲಾಗಿದೆ ಹಾಗೂ ಸಂಬಂಧಿತ ಕ್ಷೇತ್ರದ ಸಾಮಾನ್ಯ ರಹವಾಸಿಯಾಗಿರದ ರಾಜಕೀಯ ಪಕ್ಷಗಳ ಪ್ರಮುಖರು ಏಪ್ರಿಲ್ ೨೧ ರ ಸಂಜೆ ೬ ಗಂಟೆಯ ನಂತರದಲ್ಲಿ ಕ್ಷೇತ್ರದಲ್ಲಿ ಇರಲು ಅವಕಾಶವಿಲ್ಲ.
ಸದರಿ ಚುನಾವಣೆಯಲ್ಲಿ ವಿವಿಧ ಚುನಾವಣಾ ಕಾರ್ಯಗಳಿಗಾಗಿ, ಚುನಾವಣಾ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ/ಅಧಿಕಾರಿ, ವಾಹನ ಚಾಲಕರು, ಮತಕಟ್ಟೆ ಮಟ್ಟದ ಅಧಿಕಾರಿ ಹಾಗೂ ಸ್ವಯಂ ಸೇವಕರು ಹೀಗೆ ಒಟ್ಟು ಸುಮಾರು ೩೫,೦೦೦ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ.
ಮತದಾರರು ಮತದಾನದ ದಿನದಂದು ತಮ್ಮ ಅತ್ಯಮೂಲ್ಯವಾದ ಮತವನ್ನು ಸಂಬಂಧಪಟ್ಟ ಮತಗಟ್ಟಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಬೇಕೆಂದು ಈ ಮೂಲಕ ಕೋರಲಾಗಿದೆ.

ಏಪ್ರಿಲ್ ೨೩ ರಂದು ಮತದಾನದ ಸಮಯ ಬೆಳಿಗ್ಗೆ ೭ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಇರುತ್ತದೆ. ಸಮಯದ ಸದುಪಯೋಗಪಡಿಸಿಕೊಳ್ಳಲು ಜಿಲ್ಲೆ ಎಲ್ಲ ಮತದಾರರಿಗೂ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಆರ್. ವಿಶಾಲ ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button