ನಾವು ರಾಜ್ಯ ಒಡೆಯುವವರಲ್ಲ. ಆದರೆ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ಶನಿವಾರ ಬೆಳಗಾವಿಯಲ್ಲಿ ಬೃಹತ್ ಜಾಥಾ ನಡೆಯಲಿದೆ.
ಅಂದು ಬೆಳಗ್ಗೆ 9.30ಕ್ಕೆ ನಗರದ ಬೋಗಾರ್ ವೇಸ್ ವೃತ್ತದಿಂದ ಹೊರಡಲಿರುವ ಜಾಥಾ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ತೆರಳಿ ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.
ಜಾಥಾ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಾಗಿ ಗುರುವಾರ ಸಂಜೆ ಇಲ್ಲಿಯ ಸಾಹಿತ್ಯ ಭವನದಲ್ಲಿ ನೂರಾರು ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯಿತು. ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಸಭೆಯ ಸಾನಿಧ್ಯ ವಹಿಸಿದ್ದರು.
ಜಾಥಾದಲ್ಲಿ ಎಲ್ಲ ಜನಪ್ರತಿನಿಧಿಗಳು, ಕನ್ನಡಸಂಘಟನೆಗಳು, ಮಹಿಳಾ ಸಂಘಟನೆಗಳು, ಸಾಹಿತಿಗಳು, ವೃತ್ತಿಪರ ಸಂಘಟನೆಗಳು, ವಿದ್ಯಾರ್ಥಿಗಳು, ಎಲ್ಲ ರೀತಿಯ ಸಂಘಟನೆಗಳೂ ಪಕ್ಷಾತೀತವಾಗಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಇಬ್ಬರೂ ಸ್ವಾಮಿಗಳು ಕರೆ ನೀಡಿದರು.
ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಾವು ಗಟ್ಟಿ ನಿಲ್ಲದಿದ್ದರೆ ಇದು ಹಾಗೆಯೇ ಮುಂದುವರಿಯುತ್ತದೆ. ನಾವು ರಾಜ್ಯ ಒಡೆಯುವವರಲ್ಲ. ಆದರೆ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಎಲ್ಲ ಭಾಗಗಳಿಂದ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ವಯಂ ಪ್ರೇರಿತರಾಗಿ ಪ್ರತಿಭಟನಾ ಕಾರ್ಯಕ್ರಮಕ್ಕೆ ಬರಬೇಕು ಎಂದು ಸಭೆ ಕರೆ ನೀಡಿತು.
ಕ್ರೆಡೈ ರಾಜ್ಯಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರೊಫೇಶನಲ್ ಫೋರಂ ಅಧ್ಯಕ್ಷ ಬಿ.ಎಸ್.ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್, ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ರೋಹನ ಜುವಳಿ, ಲೇಖಕಿ ನೀಲಗಂಗಾ ಚರಂತಿಮಠ, ಕನ್ನಡ ಪರ ಸಂಘಟನೆಯ ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ನವನಿರ್ಮಾಣ ಪಡೆಯ ರಾಜೀವ ಟೋಪಣ್ಣವರ, ಆರ್‌ಸಿಯು ಸೆನೆಟ್ ಸದಸ್ಯ ರಾಜು ಚಿಕ್ಕನಗೌಡರ, ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಮಹೇಶ ಬಾಗಿ, ನಿವೃತ್ತ ಮುಖ್ಯ ಎಂಜಿನಿಯರ್ ಜಾವೂರ್, ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ, ಡಾ.ಎಚ್.ಬಿ.ರಾಜಶೇಖರ, ಅಶೋಕ ಪೂಜಾರಿ, ಜಾವೂರ್, ಗಣೇಶ ರೋಖಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.