ವಿದ್ಯಾರ್ಥಿಗಳು ಮೊಬೈಲ್‌ಗಳಿಂದ ದೂರವಿರಬೇಕು – ವಿನೋದ ದೊಡ್ಡಣ್ಣವರ

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಶಿಕ್ಷಣ ಪಡೆಯಲು ಮುಂದಾಗಬೇಕೆಂದು ಭರತೇಶ ಆಡಳಿತ ಮಂಡಳಿಯ ಸದಸ್ಯ ವಿನೋದ ದೊಡ್ಡಣ್ಣವರ ಅವರು ಹೇಳಿದರು.
ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್‌ಗಳಿಂದ ದೂರವಿರಬೇಕು. ಟಿವ್ಹಿ ಚಾನೆಲ್ ಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದದೆ ಕಲಿಕಾ ವಿಧಾನವನ್ನು ತಿಳಿಸುವ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಪಾಲಕರೂ ಸಹ ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಪ್ರೇರೆಪಿಸಬೇಕೆಂದು ಅವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳೆಂದು ಆಯ್ಕೆಯಾದ ಹಸನೈನ ನಿಂಬರಗಿ, ಶೌಹದ ಮಿರ್ಜಾಭಾಯಿ, ಅರಿಹಂತ ಪಾಟೀಲ ಹಾಗೂ ಅತ್ಯುತ್ತಮ ವಿದ್ಯಾರ್ಥಿನಿಯರೆಂದು ಆಯ್ಕೆಯಾದ ಕವಿತಾ ಚೌಧರಿ, ರೇಣುಕಾ ಘಸಾರಿ, ರಾಧಿಕಾ ಕಾರೇಕರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಉಪಾಧ್ಯೆ ವಹಿಸಿದ್ದರು. ವೇದಿಕೆ ಮೇಲೆ ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯರಾದ ಶ್ರೀಪಾಲ ಖೇಮಲಾಪೂರೆ, ರತ್ನಾಕರ ದೊಡ್ಡಣ್ಣವರ, ಎಂ.ಬಿ.ಪದ್ಮಣ್ಣವರ, ಹೀರಾಚಂದ ಕಲಮನಿ, ಅಭಿನಂದನ ಕೋಚೇರಿ, ವಸಂತ ಕೊಡಚವಾಡ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಪ್ರಾಚಾರ್ಯೆ ಯೋಗಿತಾ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು. ಜೆ.ಎಂ.ತಹಶಿಲ್ದಾರ ಮತ್ತು ಶೋಭಾ ಹೊಸುರ ಕಾರ್ಯಕ್ರಮ ನಿರೂಪಿಸಿದರು. ರಾಬರ್ಟ್ ಫರ್ನಾಂಡಿಸ್ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button