ಪ್ರಗತಿವಾಹಿನಿ ಸುದ್ದಿ, ಮಾಂಜರಿ
ಇಂದು ಪ್ರತಿಯೊಬ್ಬ ಯುವಕ-ಯುವತಿಯರು ಶಿಕ್ಷಣ ಕಲಿತು ನೌಕರಿ ಹಿಡಿದು ಬರುವ ವೇತನವನ್ನು ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಹಣ ಖರ್ಚು ಮಾಡುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಸಮೀಪದ ಕಲ್ಲೋಳ ಗ್ರಾಮದ ಯುವತಿ ಪೂಜಾ ಬೇನೂರಕರ ಇವರು ತಾವು ಗಳಿಸಿದ ವೇತನದಲ್ಲಿನ 1,00,101 ರೂ ಗಳನ್ನು ಘೋಸರವಾಡ ಗ್ರಾಮದಲ್ಲಿರುವ ಜಾನಕಿ ವೃದ್ದಾಶ್ರಮಕ್ಕೆ ದೇಣಿಗೆ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಧ್ಯಮ ವರ್ಗದ ಕುಂಟುಬದಲ್ಲಿ ಜನಿಸಿದವಳು ಪೂಜಾ. ಇವರ ತಂದೆ ಚಿಕ್ಕದೊಂದು ಕಿರಾಣಿ ಅಂಗಡಿ ನಡೆಸುತ್ತಾ ಜಿವನ ನಡೆಸುತ್ತಾರೆ. ಪೂಜಾ ತನ್ನ 10 ನೇ ತರಗತಿಯವರಗೆ ಕಲ್ಲೋಳ ಗ್ರಾಮದಲ್ಲಿ ಶಿಕ್ಷಣ ಪಡೆದು, ನಂತರ ಚಿಕ್ಕೋಡಿಯಲ್ಲಿ ಪಿಯುಸಿ ಮುಗಿಸಿ, ಚಿದಾನಂದ ಕೋರೆ ತಾಂತ್ರಿಕ ಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೇಲಿಕಮ್ಯುನಿಕೇಶನ್ ಡಿಪ್ಲೋಮಾ ಕೋರ್ಸ ಮುಗಿಸಿ ನಂತರ ನಿಪ್ಪಾಣಿಯ ವ್ಹಿ.ಎಮ್.ಎಸ್ ಮಹಾವಿದ್ಯಾಲಯದಲ್ಲಿ ಬಿಇ ಪದವಿಯನ್ನು ಪೂರ್ಣಗೊಳಿಸಿ ಇಂದು ಪುಣೆಯ ಅಕ್ಷರಾ ಡಿಜಿಟಲ್ ಕಂಪನಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ನೌಕರಿ ಮಾಡುತ್ತಿದ್ದಾರೆ.
ವಿದ್ಯಾವಂತರು ತಮ್ಮ ತಂದೆ-ತಾಯಿಗಳನ್ನು ಪಾಲನೆ ಪೋಷಣೆ ಮಾಡಲು ಹಿಂದೆಟು ಹಾಕುತ್ತಿರುವುದರಿಂದ ಇಂದು ವೃದ್ಧಾಶ್ರಮಗಳು ಬೆಳೆಯುತ್ತಿವೆ. ಪೂಜಾ ಅವರು ವೃದ್ಧಾಶ್ರಮಕ್ಕೆ ದೇಣಿಗೆ ನೀಡುವುದಾಗಿ ತಂದೆ-ತಾಯಿಗೆ ತಿಳಿಸಿದಾಗ ಒಪ್ಪಿಗೆ ನೀಡಿದರು. ನಂತರ ಪೂಜಾ ಪುಣೆಯಿಂದ ಕಲ್ಲೋಳ ಗ್ರಾಮಕ್ಕೆ ತೆರಳಿ ತಂದೆ-ತಾಯಿಯನ್ನು ಕರೆದುಕೊಂಡು ಹತ್ತಿರದ ಘೋಸರವಾಡ ಗ್ರಾಮದಲ್ಲಿನ ಶ್ರೀ ಹಾಲಸಿದ್ಧನಾಥ ವಿವಿಧ ಉದ್ದೇಶಗಳ ಸಹಕಾರಿ ಸಂಘ ನಡೆಸುವ ಜಾನಕಿ ವೃದ್ಧಾಶ್ರಮಕ್ಕೆ ತೆರಳಿ ವೃದ್ಧಾಶ್ರಮದ ವ್ಯವಸ್ಥಾಪಕ ಬಾಬಾಸಾಬ ಪೂಜಾರಿಯವರಿಗೆ 1,00,101 ರೂ ಗಳನ್ನು ನೀಡಿದರು.
ತಂದೆ ಶಿವಾಜಿ ಬೇನೂರಕರ ಹಾಗೂ ಕುಟುಂಬದವರು, ಬಾಳಾಸಾಹೇಬ ಪಾಟೀಲ, ಬಬನ ಚೌಗುಲೆ, ಅರುಣ ಕಮತೆ, ಭಿಮರಾವ ಚಿಂಚವಾಡ ಮುಂತಾದವರಿದ್ದರು.
ಕಲ್ಲೋಳ ಗ್ರಾಮದ ಪೂಜಾ ಬೇನೂರಕರ ಇವರು ಘೋಸರವಾಡ ಗ್ರಾಮದ ಜಾನಕಿ ವೃದ್ಧಾಶ್ರಮಕ್ಕೆ ತಾನು ಸಂಗ್ರಹಿಸಿದ ವೇತನದಲ್ಲಿನ 1,00,101 ರೂ. ಗಳನ್ನು ದೇಣಿಗೆಯನ್ನು ನೀಡಿದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ