Latest

ಶ್ರೀಗಂಧ ಕಟ್ಟಿಗೆ ಕಡಿಯುತ್ತಿದ್ದವರ ಬಂಧನ: 25 ಕೆಜಿ ಶ್ರೀಗಂಧ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದವರನ್ನು ಪತ್ತೆ ಹಚ್ಚಿ ಅವರಿಂದ ೨೫ ಕೆಜಿಯಷ್ಟು ಶ್ರೀಗಂಧದ ಮರದ ತುಂಡುಗಳು, ಈ ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾದ ಒಟ್ಟೂ ಐವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 
ಗೋಲಿಹಳ್ಳಿ ಅರಣ್ಯ ವಲಯದ ಗೋಧೋಳಿ ಶಾಖೆ ವ್ಯಾಪ್ತಿಯ ಜಂಗಮನಹಟ್ಟಿ ಅರಣ್ಯದಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಆರೋಪದ ಮೇರೆಗೆ ಚನ್ನಮ್ಮನ ಕಿತ್ತೂರು ತಾಲೂಕು ಕತ್ರಿ ದಡ್ಡಿಯ ರಮೇಶ ಪಾಟೀಲ, ಪ್ರಕಾಶ ಹಂಚಿನಾಳ, ಶಿವಲಿಂಗಪ್ಪ ಖನಗಾಂವಿ, ಯಮುನಪ್ಪ ಖನಗಾಂವಿ ಮತ್ತು ಕರೆಪ್ಪ ನಾಯ್ಕರ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ. ಇಬ್ಬರೂ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ನಾಗರಗಾಳಿ ಎಸಿಎಫ್ ಎಂ.ಕೆ ಪಾತ್ರೋಟ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಅಮರನಾಥ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಲಿಹಳ್ಳಿ ಆರ್.ಎಫ್.ಒ ರತ್ನಾಕರ ಓಬಣ್ಣವರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ ಮರೆಪ್ಪನವರ ಎಚ್ ಲೋಹಿತ್, ಸಂತೋಷ ಹಿರೇಮಠ, ಸಿಬ್ಬಂದಿ ಮಂಜುನಾಥ ಗೌಡ್ರ, ಬಿ.ಎ ಮಹಾಡಿಕ್, ಪಿ.ಎಂ ಬಾವರೇಕರ, ಆರ್.ಎನ್ ಹುಬ್ಬಳ್ಳಿ, ವಿ.ಜಿ ಕರಲಿಂಗನವರ, ಅಜಯ್, ಭಾಸ್ಕರ್ ಹಾಗೂ ಇತರರು ಭಾಗವಹಿಸಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button