Kannada NewsLatestNational

*ಹಾಸ್ಟೆಲ್‌ ಆಹಾರ ಮೆನುವಿನಲ್ಲಿ ಗೋಮಾಂಸಕ್ಕೂ ಬೇಡಿಕೆ ಇಟ್ಟ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ವಸತಿನಿಲಯಗಳ ಆಹಾರ ಮೆನುವಿನಲ್ಲಿ ಚಿಕನ್‌ ಮತ್ತು ಮಟನ್‌ ಜೊತೆಗೆ ಗೋಮಾಂಸವನ್ನೂ ಸೇರಿಸುವಂತೆ ತಮಿಳುನಾಡಿನ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿರುವ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಪ್ರತಿಕ್ರಿಯಿಸಿದ್ದು, ಕೆಲವು ವಿದ್ಯಾರ್ಥಿಗಳು ತಮ್ಮ ಆಹಾರದಲ್ಲಿ ಗೋಮಾಂಸವನ್ನು ಸೇರಿಸುವಂತೆ ಮನವಿ ಮಾಡಿರುವುದು ನಿಜ ಎಂದು ತಿಳಿಸಿದ್ದಾರೆ.

ಚೆನ್ನೈನ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಕೆಲ ವಿದ್ಯಾರ್ಥಿಗಳು, ಹಾಸ್ಟೆಲ್‌ನ ಪ್ರಸ್ತುತ ಮಾಂಸಾಹಾರಿ ಆಹಾರ ಮೆನುವಿನಲ್ಲಿ ಗೋಮಾಂಸವನ್ನೂ ಸೇರಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಈಗಾಗಲೇ ಚಿಕನ್‌ ಮತ್ತು ಮಟನ್‌ ನೀಡಲಾಗುತ್ತಿದ್ದು, ಪ್ರತಿ ಸೋಮವಾರ ಬಿರಿಯಾನಿ ನೀಡುವ ವ್ಯವಸ್ಥೆಯೂ ಇದೆ. ಆದರೆ ಮಟನ್‌ನ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬಗಳಲ್ಲಿ ನಿಯಮಿತವಾಗಿ ಮಾಂಸ ಸೇವನೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕಡಿಮೆ ವೆಚ್ಚದಲ್ಲಿ ದೊರೆಯುವ ಗೋಮಾಂಸವನ್ನು ಹಾಸ್ಟೆಲ್‌ ಮೆನುವಿನಲ್ಲಿ ಸೇರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಈ ಬೇಡಿಕೆ ಇದೀಗ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಆಹಾರ ಆಯ್ಕೆ, ಸರ್ಕಾರಿ ಹಾಸ್ಟೆಲ್‌ಗಳ ಮೆನು ಹಾಗೂ ವಿದ್ಯಾರ್ಥಿಗಳ ಅಗತ್ಯಗಳ ಕುರಿತು ಚರ್ಚೆಗೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button