CrimeKannada NewsLatestNational

ಪತ್ನಿ ಹಾಗೂ ಇಬ್ಬರು ಅರ್ಚಕರಿಗೆ ಗುಂಡಿಕ್ಕಿ ಹತ್ಯೆ: ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಆರೋಪಿ ಎನ್ ಕೌಂಟರ್ ಗೆ ಬಲಿ

ಪ್ರಗತಿವಾಹಿನಿ ಸುದ್ದಿ: ಪತ್ನಿ ಹಾಗೂ ಇಬ್ಬರು ಅರ್ಚಕರನ್ನ ಗುಂಡಿಕ್ಕಿ ಹತ್ಯೆಗೈದ ಬಳಿಕ ಮೂವರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ ನಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಈ ಘಟನೆ ನಡೆದಿದೆ. ಮೃತ ಆರೋಪಿಯನ್ನು ಅರವಿಂದ್‌ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ಚಕಮಕಿ ವೇಳೆ ಆತ ತನ್ನ ಮೂರು ಮಕ್ಕಳಲ್ಲಿ ಒಬ್ಬನ ಮೇಲೂ ಗುಂಡು ಹಾರಿಸಿದ್ದ. ಮಗು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಇನ್ನುಳಿದ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಅಜಮ್‌ಗಢದ ಎಸ್‌ಎಸ್‌ಪಿ ಅನಿಲ್ ಕುಮಾರ್ ಮಾತನಾಡಿ, ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ತನ್ನ ಮಕ್ಕಳನ್ನ ಕೋಣೆಯೊಂದರಲ್ಲಿ ಕೂಡಿಹಾಕಿದ್ದ. ನಮ್ಮ ಪೊಲೀಸರು ಶರಣಾಗುವಂತೆ ಮತ್ತು ಮಕ್ಕಳನ್ನ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ರು. ಆದಾಗ್ಯೂ ಆತ ಕರಗಲಿಲ್ಲ. ಪೊಲೀಸರು ಮತ್ತು ಕುಟುಂಬದವರ ಮೇಲೆ ಗುಂಡು ಹಾರಿಸುವುದಾಗಿ, ಜೊತೆಗೆ ಮಕ್ಕಳನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.

ನಂತರ, ತನ್ನ ಮಗನ ಮೇಲೂ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ಕೇಳಿ ಪೊಲೀಸರು ರೂಮಿನೊಳಗೆ ನುಗ್ಗಿದ್ದಾರೆ. ಆಗ ಆರೋಪಿ ಪೊಲೀಸರತ್ತ ಮನಬಂದಂತೆ ಗುಂಡು ಹಾರಿಸಲು ಶುರು ಮಾಡಿದ್ದಾನೆ. ನಾವು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ರೂ, ಆರೋಪಿ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಆತ್ಮರಕ್ಷಣೆಗಾಗಿ ಹಾಗೂ ಮಕ್ಕಳ ರಕ್ಷಣೆಗಾಗಿ ನಾವು ಪ್ರತಿದಾಳಿ ನಡೆಸಬೇಕಾಯಿತು. ಈ ವೇಳೆ ಆರೋಪಿಗೆ ಗುಂಡು ತಗುಲಿ ಗಾಯಗೊಂಡಿದ್ದ. ತಕ್ಷಣ ಆತನನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಅರವಿಂದ್‌ ಹಾಗೂ ಆತನ ಮಗ ಮೃತಪಟ್ಟರು ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.

Related Articles

Back to top button