Latest

ಸತೀಶ್ ಜಾರಕಿಹೊಳಿ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಚುನಾವಣೆ ಪ್ರಚಾರ ಸಭೆಯಲ್ಲಿ ಬ್ರಾಹ್ಮಣ ಸಮಾಜದ ಅವಹೇಳನ ಮಾಡಿದ ರಾಜ್ಯ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಲು ಬ್ರಾಹ್ಮಣ ಮಹಾಸಭಾ ನಿರ್ಧರಿಸಿದೆ.
ಬೆಳಗಾವಿ ಲೋಕಸಭೆ ಚುನಾವಣೆಯ ಪ್ರಚಾರದ ಸಂಬಂಧ ನಿನ್ನೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಜ್ಯ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಬ್ರಾಹ್ಮಣ ಸಮಾಜದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಈ ರೀತಿ ಒಂದು ಸಮಾಜದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುವುದು ಚುನಾವಣೆ ಆಯೋಗ ವಿಧಿಸಿರುವ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಆಯೋಗವು ತತಕ್ಷಣ ಸಚಿವರ ವಿರುದ್ಧ ಕಠಿಣ ಕ್ರಮಕೈಕೊಳ್ಳಬೇಕು ಎಂದು ಚುನಾವಣೆ ಆಯೋಗಕ್ಕೆ ರಾಜ್ಯ ಬ್ರಾಹ್ಮಣ ಮಹಾಸಭಾದಿಂದ ಗುರುವಾರ ದೂರು ನೀಡಲು ನಿರ್ಧರಿಸಲಾಗಿದೆ.
 ಚುನಾವಣೆ ಆಯೋಗ ಕ್ರಮಕೈಕೊಳ್ಳಲು ಹಿಂದೇಟು ಹಾಕಿದರೆ ನಾವು ಅನಿವಾರ್ಯವಾಗಿ ಸುಪ್ರೀಮ್ ಕೋರ್ಟಿನ ಮೊರೆಹೋಗಬೇಕಾಗುತ್ತದೆ ಎಂದು ರಾಜ್ಯ ಬ್ರಾಹ್ಮಣ ಸಮಾಜದ ರಾಜ್ಯ ಉಪಾಧ್ಯಕ್ಷ ಹನುಮಂತ ಕೊಟಬಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಚಾರ ಸಭೆಗಳು ನಡೆದಿದ್ದು ಬಹಿರಂಗ ಸಭೆಗಳಲ್ಲಿ ರಾಜಕೀಯ ಮುಖಂಡರು ಆಡುವ ಮಾತುಗಳ ಬಗ್ಗೆ ಚುನಾವಣೆ ಆಯೋಗವು ಸಾಕಷ್ಟು ಕಟ್ಟಳೆಗಳನ್ನು ವಿಧಿಸಿದ್ದರೂ ಅವುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸುಪ್ರೀಮ್ ಕೋರ್ಟು ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. 
ಭಾರತೀಯ ಸೇನೆಗೆ ತಾವು ಹೋಗುವುದರ ಜೊತೆಗೆ ಎಲ್ಲ ಕೆಳವರ್ಗದ ಜನರನ್ನು ಸೇನೆಗೆ ಕರೆದುಕೊಂಡು ಹೋಗಿರತಕ್ಕಂಥವರು ಮೇಲ್ವರ್ಗದ ಜನರು. ಇದನ್ನು ಸತೀಶ ಜಾರಕಿಹೊಳಿ ಅರಿಯಬೇಕು. ದೇಶಪಾಂಡೆ, ಜೋಶಿ, ಕುಲಕರ್ಣಿ, ಇವರ್ಯಾರೂ ಸೇನೆಗೋಸ್ಕರ ಸತ್ತಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಇತಿಹಾಸದ ಸಂಪೂರ್ಣ ಅರಿವೇ ಇಲ್ಲದೆ ಮಾತನಾಡುವುದು ಸತೀಶ್ ಕಿಜಾರಕಿಹೊಳಿಯವರ  ಜಾಯಮಾನವಾಗಿದೆ ಎಂದು ಕೊಟಬಾಗಿ ಹೇಳಿದ್ದಾರೆ.
ಸೇನೆಗಿಂತಲೂ ಮೊದಲು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರಲ್ಲಿ ಜೋಶಿ, ಕುಲಕರ್ಣಿ, ದೇಶಪಾಂಡೆ ಎಂಬುವರೇ ಹೆಚ್ಚಾಗಿದ್ದರು. ಇದನ್ನು ಸತೀಶ್ ಜಾರಕಿಹೊಳಿಯವರು ಅರಿತುಕೊಳ್ಳಲಿ. ಕೇವಲ ಪಕ್ಷಕ್ಕೋಸ್ಕರ ಒಂದು ಪಂಗಡವನ್ನು ಗುರಿಯಾಗಿಟ್ಟುಕೊಂಡು ಮಾತನಾಡುವುದು ಇವರ ನೈತಿಕತೆ ಅಲ್ಲ. ಈ ರೀತಿ ಜಾತಿ ಧರ್ಮ ಕೇವಲ ಅವರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡುವುದು ಚುನಾವಣೆಗೋಸ್ಕರ ಸಹಿತ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button