ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಮಾಜದಲ್ಲಿರುವ ತಾರತಮ್ಯಗಳ ವಿರುದ್ದ ೧೨ನೇ ಶತಮಾನದಲ್ಲಿ ಶರಣರು ನಡೆಸಿದ ಹೋರಾಟವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು.
ನಗರದ ಕುಮಾರಗಂಧರ್ವ ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿತ್ತು. ಆದರೆ ಇಂದಿಗೂ ಜಾತಿ, ಮತ, ಲಿಂಗ ಎಂಬುದೇ ಮುಂದುವರೆದಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಯುವ ಅಗತ್ಯವಿದೆ. ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾನತೆ ಹಾಗೂ ಸಹೋದರತೆಯನ್ನು ಸಾರುವ ಕಾರ್ಯವನ್ನು ಮಾಡಿದರು. ನೇರವಾಗಿ ಸಾಮಾಜಿಕ ದೋಷಗಳನ್ನು ಎತ್ತಿ ತೋರಿಸಿ ಅದಕ್ಕೆ ಪರಿಹಾರವನ್ನು ಸೂಚಿಸುವ ಕಾರ್ಯವನ್ನು ಮಾಡಿದ ಅವರನ್ನು ಸ್ಮರಿಸಬೇಕಾಗಿದೆ ಎಂದು ಅವರು ಹೇಳಿದರು.
ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಈಶ್ವರ ಮಂಟೂರ ಅವರು, ನೇರ ನುಡಿಯ ವಚನಕಾರ ಅಂಬಿಗರ ಚೌಡಯ್ಯ ಕೇವಲ ಒಂದು ಜಾತಿ ಸಮುದಾಯ ಅಥವಾ ಕುಲಕ್ಕೆ ಸೀಮಿತವಾದವರಲ್ಲ. ಅವರು ನೀರಾಶ್ರಿತರನ್ನು, ಬಡವರನ್ನು ಎತ್ತಿ ಹಿಡಿದವರು. ಅವರ ವಚನಗಳಲ್ಲಿ ಬದುಕಿನ ಶೂತ್ರಗಳಿವೆ. ಅವರಲ್ಲಿ ವೃತ್ತಿ ಗೌರವವಿತ್ತು. ದೇವರಿಗೆ ಹೆಸರಿಲ್ಲ ಎಲ್ಲವನ್ನು ನಾವೇ ಸೃಷ್ಠಿಕೊಂಡಿಸಿರುವಂತಹದ್ದು ಎಂದು ತಿಳಿಸಿದ ಚೌಡಯ್ಯನವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸುಮಾರು ೮೦೦ ವರ್ಷಗಳ ಹಿಂದೆಯೇ ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ವೈಚಾರಿಕತೆ ಅರಿವು ಮೂಡಿಸಲು ಹಾಗೂ ಮೂಢನಂಬಿಕೆಗಳನ್ನು ಮತ್ತು ಅರ್ಥವಿಲ್ಲದ ಆಚರಣೆಗಳನ್ನು ತೊಲಗಿಸಲು ಶ್ರಮಿಸಿದ ಅಂಬಿಗರ ಚೌಡಯ್ಯ ನಿಜಕ್ಕೂ ನಿಜ ಶರಣ ಎಂದು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಮದುಶ್ರೀ ಪೂಜಾರ, ಬೆಳಗಾವಿ ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಸುಣಗಾರ, ಬೆಳಗಾವಿ ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ಅಧ್ಯಕ್ಷ ಗಂಗಾರಾಮ ತಳವಾರ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ್ ಕರಿಶಂಕರ ಸ್ವಾಗತಿಸಿದರು. ಮಂಗಲಾ ಮಠದ ಹಾಗೂ ಸಂಗಡಿಗರು ನಾಡಗೀತೆ ಹಾಗೂ ವಚನಗಾಯನವನ್ನು ಪ್ರಸ್ತುತ ಪಡಿಸಿದರು.
ಮೆರವಣಿಗೆ: ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆಗೆ ಸಂಸದ ಸುರೇಶ ಅಂಗಡಿ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಬೂದೆಪ್ಪ ಹೆಚ್.ಬಿ. ಬೆಳಗಾವಿ ತಹಶೀಲ್ದಾರ ಮಂಜುಳಾ ನಾಯಕ ಉಪಸ್ಥಿತರಿದ್ದರು. ವಿವಿಧ ಕಲಾತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ