ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಸಮಾಜದ ಅಂಕುಡೊಂಕು ಸರಿಪಡಿಸಿ, ಜಾತಿ ಭೇದಗಳನ್ನು ಮಾಡದೆ. ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡುತ್ತ ಸಮಾಜದ ಜೊತೆ ಬೆರೆಯುವವನು ನಿಜವಾದ ಸ್ವಾಮಿ ಎಂದು ಬೆಳ್ಳೆರಿ ಶ್ರೀ ಶಿವಾನಂದ ಮಠದ ನಿಸರ್ಗ ಚಿಕಿತ್ಸಾ ತಜ್ಞ ಡಾ. ಬಸವಾನಂದ ಸ್ವಾಮೀಜಿ ಹೇಳಿದರು.
ಅವರು ಸಮೀಪದ ಸುಣಧೋಳಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ದೀಪೋತ್ಸವ ಮತ್ತು ಶಿವಾನುಭಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠಾಧೀಶರಾದವರು ಭಾಷಾಭಿಮಾನ, ದೇಶಭಿಮಾನ ಬೆಳೆಸಿಕೊಂಡು ಸಮಾಜ ಸುಧಾರಣೆಯ ಕಾರ್ಯ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಬೇಸರದ ವಿಷಯವಾಗಿದೆ. ಪಾಶ್ಚಾತ್ಯ ಪರಂಪರೆ ಬಿಟ್ಟು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳುವುದರ ಜೊತೆ ಮಕ್ಕಳಿಗೂ ಕಲಿಸೋಣ. ಶರಣರ ಮಾತುಗಳನ್ನು ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಹಂಕಾರಕ್ಕೆ ವಿರಾಮ ನೀಡಿದಾಗ ಮನುಷ್ಯ ಆರಾಮವಾಗಿರುತ್ತಾನೆ ಎಂದರು.
ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತ ದೇವರು ಮಾತನಾಡಿ, ನಿಷ್ಕಲ್ಮಶ ಮನಸ್ಸಿನಲ್ಲಿ ಭಗವಂತ ನೆಲೆಸಿರುತ್ತಾನೆ. ಗುರುವಿನ ಗುಲಾಮರಾಗುವ ತನಕ ಮುಕ್ತಿ ಪ್ರಾಪ್ತಿಯಾಗುವುದಿಲ್ಲ. ಅದಕ್ಕಾಗಿ ನಾವು ಭಗವಂತನ ಸೇವೆ ಮಾಡಬೇಕು. ಮಹಾತ್ಮರ ಮಾತುಗಳನ್ನು ಆಲಿಸಿ ಅವುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡರೆ ನಿತ್ಯ ಬದುಕು ಸಾರ್ಥಕವಾಗುತ್ತದೆ. ಧರ್ಮದ ತಿರುಳು ತಿಳಿಯದೇ ಇದ್ದರೆ ಮನುಷ್ಯ ಜನ್ಮವೇ ವ್ಯರ್ಥ. ಜಗತ್ತಿನಲ್ಲಿ ದೇವರು ದೊಡ್ಡವನಲ್ಲ, ದೇವರನ್ನು ತೋರಿಸುವ ಗುರುದೇವ ದೊಡ್ಡವನು. ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಐಶ್ವರ್ಯ-ಕೀರ್ತಿ ಪ್ರಾಪ್ತಿಯಾಗುವುದು ಎಂದು ಹೇಳಿದರು.
ಹೂಲಿಕಟ್ಟಿ ಶ್ರೀ ಶಿವಲಿಂಗೇಶ್ವರ ಮಠದ ಶ್ರೀ ಕುಮಾರ ದೇವರು ಮಾತಾನಾಡಿ, ಶರೀರಕ್ಕೆ ಸಂಸ್ಕಾರ ಅನ್ನುವುದನ್ನು ಮೊದಲು ನೀಡಬೇಕು. ನಮ್ಮ ಜೀವನ ಪಾವನವಾಗಲು ಗುರುವಿನ ಅನುಗ್ರಹಬೇಕು ಎಂದರು.
ಹೊಸ ಯರಗುದ್ರಿ ಈರಲಿಂಗೇಶ್ವರ ಮಠದ ಶ್ರೀ ಸಿದ್ದಪ್ರಭು ಶಿವಾಚಾರ್ಯ ಸ್ವಾಮಿಜೀ ಮಾತನಾಡಿ, ನಾವೆಲ್ಲರೂ ವಿಶೇಷ ಪವಾಡ ನೋಡಬೇಕಾದರೆ ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಲ್ಲದ ಬಾಗೇವಾಡಿಯ ಶ್ರೀ ಮಾಹಾಂತೇಶ್ವರ ವಿರಕ್ತಮಠದ ಶ್ರೀ ಶಿವಾನಂದ ಮಹಾಸ್ವಾಮಿ ಆಶೀರ್ವಚನ ನೀಡಿ, ಹಿಂದಿನ ಕಾಲದಲ್ಲಿ ಹೆಣ್ಣನ್ನು ತಿರಸ್ಕಾರ ಭಾವದಿಂದ ಕಾಣುತ್ತಿದ್ದರು. ಆದರೆ ಈಗ ಮಹಿಳೆ ಎಲ್ಲ ರಂಗಗಳಲ್ಲಿ ಗುರುತಿಸಿಕೊಂಡು ಕಾರ್ಯ ನಿರ್ವಹಿಸುತ್ತಿವುದರಿಂದ ಪುರುಷನಿಗೆ ಸರಿಸಮಾನಳಾಗಿದ್ದಾಳೆ. ಎಲ್ಲಿ ಮಹಿಳೆಯರನ್ನು ಗೌರವಿಸಿ ಪೂಜಿಸುವರೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂದು ಹೇಳಿದರು.
ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶ್ರೀ ಶಿವಾನಂದ ಸ್ವಾಮಿಜೀ, ಧಾರವಾಡದ ಶರಣರಾದ ಬಿ.ಜಿ.ಪಾಟೀಲ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಸಿ.ಎಸ್.ವಾಲಿ, ಲಕ್ಷ್ಮಣ ಸೋಮುಗೌಡ, ಶಿವಪ್ಪಾ ಜಿಡ್ಡಿಮನಿ, ಭೀರಪ್ಪ ಮಹಾಲಿಂಗಪೂರ, ಸಿದ್ದಪ್ಪ ಗಾಣಿಗೇರ, ಶಂಕರ ದೇವನಂದ, ಮಹಾಲಿಂಗಪ್ಪ ಢವಳೇಶ್ವರ, ಭೀಮನಗೌಡ ಪಾಟೀಲ ಉಪಸ್ಥಿತರಿದ್ದರು.
ಎಂ.ಎಸ್. ಅಂದಾನಿ ನಿರೂಪಿಸಿದರು. ಮುತ್ತು ಜಿಡ್ಡಿಮನಿ ಸ್ವಾಗತಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೂ, ನಿಮ್ಮ ಪರಿಚಿತರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ