ಈ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಎಲ್ಲಾ ಸರಕಾರಿ ಪ್ರೌಢಶಾಲೆಗಳು ಉತ್ತಮ ಪ್ರಗತಿ ಸಾಧಿಸಿದ್ದು ಯಾವುದೇ ಶಾಲೆಗಳಲ್ಲಿಯೂ ಶೂನ್ಯ ಫಲಿತಾಂಶ ದಾಖಲಾಗಿಲ್ಲ. ಇದು ನಮ್ಮ ಸರಕಾರಿ ಶಾಲೆಗಳ ಹೆಮ್ಮೆಯ ಸಾಧನೆ. ಈಗ ನಮ್ಮ ಪೋಷಕರು ೭/೮ ನೇ ತರಗತಿ ಪಾಸಾದ ತಮ್ಮ ಮಕ್ಕಳನ್ನು ಯಾವ ಶಾಲೆಗಳಿಗೆ ಸೇರಿಸಬೇಕೆಂದು ಚಿಂತೆ ಮಾಡಬೇಕಾದ ಅವಶ್ಯಕತೆ ಇದೆ. ಯಾವುದೇ ಖರ್ಚು ಇಲ್ಲದೆ ಉತ್ತಮ ಫಲಿತಾಂಶ ಗಳಿಸುವ ಅವಕಾಶ ಇದ್ದರೂ ದುಬಾರಿ ಹಣ ತೆತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಅನಿವಾರ್ಯ ಇದೆಯೇ? ಆಳವಾಗಿ ಚಿಂತಿಸಿ.
ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಏಕೆ ಸೇರಬೇಕು? ಏಕೆಂದರೆ, ಇಲ್ಲಿ
1.ಪೋಷಕರ ಮಾತಿಗೆ ಹೆಚ್ಚು ಬೆಲೆ ಇದೆ.
2.ಪೋಷಕರು ಮತ್ತು ಮಕ್ಕಳನ್ನು ಮುಕ್ತ ಸ್ವಾತಂತ್ರ್ಯ ನೀಡಿ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ.
3.ಪೋಷಕರೇ ಶಾಲಾಭಿವೃದ್ದಿಯ ಅಧ್ಯಕ್ಷರಾಗಿ/ಸದಸ್ಯರಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಎಲ್ಲಾ ಅವಕಾಶಗಳು ಇವೆ.
4.ಪ್ರತಿ ತಿಂಗಳು ಫೀ ಕೊಟ್ಟಿಲ್ಲ ಎಂದು ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸುವ ಪರಿಪಾಠ ಇಲ್ಲ.
5.ಡೊನೇಷನ್ ನೀಡುವ ಬದಲು ಮನೆಯಲ್ಲಿಯೇ ಆ ಹಣದಿಂದ ಉತ್ತಮ ಪುಸ್ತಕಗಳನ್ನು ಖರೀದಿಸಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿ ಮುಂದಿನ ಹಲವಾರು ತಲೆಮಾರು ಪ್ರಯೋಜನ ಪಡೆಯಬಹುದಾಗಿದೆ.
6.ಕ್ರೀಡೆಗೆ ಉತ್ತಮ ಅವಕಾಶವಿದೆ.
7.ಟ್ಯೂಷನ್ ಹಾವಳಿ ಇಲ್ಲ. ಶಾಲೆಯಲ್ಲಿಯೇ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.
8.ಯಾವಾಗ ಪೋಷಕರಿಗೆ ಕಾಲಾವಕಾಶ ಇರುತ್ತದೆಯೋ ಆ ದಿನ ಆ ವೇಳೆ ಶಾಲೆಗೆ ಹೋಗಿ ಮಗುವಿನ ಪ್ರಗತಿ ಬಗ್ಗೆ ವಿಚಾರಿಸಲು ಮುಕ್ತ ಅವಕಾಶ ಇದೆ.
9.ಪ್ರತಿ ತಿಂಗಳು ಶಾಲೆಯಿಂದ ಉಚಿತವಾಗಿ ಪ್ರಗತಿ ಪತ್ರ ಕಳುಹಿಸಿಕೊಡಲಾಗುವುದು.
10.ಪರೀಕ್ಷಾ ಪೂರ್ವ ತರಬೇತಿ ವ್ಯವಸ್ಥೆ ಇದೆ.
11.ಆಂಗ್ಲ ಮಾಧ್ಯಮದಲ್ಲಿ ಕಲಿಯಲೂ ಅವಕಾಶ ಇದೆ.
12. ಬಿಸಿಯೂಟದ ವ್ಯವಸ್ಥೆ ಇದ್ದು ತಾಯಂದಿರು ಬೇಗನೆ ಎದ್ದು ಡಬ್ಬಿ ತಯಾರು ಮಾಡಿ ಕಳುಹಿಸುವ ಅಗತ್ಯವಿಲ್ಲ.
13.ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ.
14.ಮಕ್ಕಳನ್ನು ಶಾಲೆಗೆ ಸೇರಿಸಲು ದೊಡ್ಡ ಕ್ಯೂಗಳಲ್ಲಿ ಗಂಟೆ ಗಟ್ಟಲೆ ನಿಲ್ಲುವ ಗೋಜಿಲ್ಲ.
15.ಫೀ ಕಟ್ಟುವ ವಿಷಯದಲ್ಲಿ ಪೋಷಕರು ಆತಂಕ ಪಡುವ ಅಗತ್ಯವಿರುವುದಿಲ್ಲ.
ಮಕ್ಕಳೇ ನಿಮ್ಮ ಸ್ನೇಹಿತ ಅಲ್ಲಿ ಸೇರಿದ್ದಾನೆ, ನಾನು ಅಲ್ಲಿಯೇ ಸೇರುತ್ತೇನೆ ಎಂದು ಪೋಷಕರಿಗೆ ಒತ್ತಾಯ ಮಾಡದಿರಿ. ಅದರಿಂದ ಹೊರಬಂದು ನಿಮಗೆ ಮತ್ತು ನಿಮ್ಮ ತಂದೆ ತಾಯಂದಿರಿಗೆ ಪೂರ್ಣ ಗೌರವ ಮತ್ತು ಮುಕ್ತ ಸ್ವಾತಂತ್ರ್ಯ ಇರುವ, ನಿಮ್ಮ ತಂದೆ ತಾಯಂದಿರಿಗೆ ಪ್ರತಿ ತಿಂಗಳ ಶುಲ್ಕ ಒದಗಿಸಲು ಹೊರೆಯಾಗದ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ನಂತರ ಪೋಷಕರಿಗೆ ಸರಕಾರಿ ಶಾಲೆಗೆ ಸೇರಿಸಿ ಎಂದು ಕೇಳಿ. ಖರ್ಚುಗಳೇ ಇಲ್ಲದೆ ಕಲಿತು ಉತ್ತಮ ದರ್ಜೆ ಗಳಿಸಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
(ಲೇಖಕರು- ನಿರ್ದೇಶಕರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ