Latest

ಸಿನಿಮಾದಲ್ಲಿ ಕನ್ನಡ ಕಥೆಗಳು ರಾರಾಜಿಸುವಂತಾಗಲಿ…

*

  (ಡಿಸೆಂಬರ್ ೧೭ ರಿಂದ ಬೆಳಗಾವಿಯಲ್ಲಿ ಆಭವಾಗಲಿರುವ ಚಿತ್ರೋತ್ಸವ ನಿಮಿತ್ತ ಲೇಖನ)

ಪ್ರಗತಿವಾಹಿನಿ ವಿಶೇಷ
ಅಬ್ಬಾ ಅಂತೂ ಇಂತೂ ಸತತ ಪ್ರಯತ್ನದಿಂದ, ನಾನು ಕನ್ನಡ ಸಿನಿಮಾ ನೋಡಿದೆ. ಅದೆಂಥ ಪ್ರಯತ್ನ ಅಂತೀರಾ ಒಂದಲ್ಲ,ಎರಡಲ್ಲ ಯಶಸ್ವಿ ನಾಲ್ಕನೇ ಬಾರಿಗೆ ನೋಡಿದ್ದು. ತಪ್ಪು ತಿಳಿಯಬೇಡಿ ನಾಲ್ಕು ಬಾರಿ ಅಂದರೆ ಚಿತ್ರ ವೀಕ್ಷಣೆಗೆ ಹೋದಾಗಲೆಲ್ಲ ಪ್ರೇಕ್ಷಕರಿಲ್ಲದೆ ಪ್ರದರ್ಶನ ರದ್ದು ಮಾಡಿದ್ದರಿಂದ ಎರಡು ಬಾರಿಯಾದರೆ, ಸ್ಯಾಟಲೈಟ್ ಲೈಸೆನ್ಸ್ ಇಲ್ಲ ಎನ್ನುವ ಕಾರಣದಿಂದ ಮಗದೊಮ್ಮೆ ಚಿತ್ರ ಪ್ರದರ್ಶನ ಕಾಣಲಿಲ್ಲ ,ಹೀಗೆ ಮೂರುಬಾರಿ ಚಿತ್ರಮಂದಿರವನ್ನಷ್ಟೇ ನೋಡಿ, ಸಿನಿಮಾ ವೀಕ್ಷಿಸದೆ ಮರಳಿ ಬಂದ ನತದೃಷ್ಟ ಕನ್ನಡ ಪ್ರೇಕ್ಷಕ ನಾನು. ಹೀಗಾಗುವುದು ಇದೇ ಮೊದಲಲ್ಲ. ಸಾಕಷ್ಟುಬಾರಿ ಚಲನಚಿತ್ರಗಳನ್ನು ನೋಡಲು ಹೋಗಿ ನಿರಾಸೆಯಿಂದ ಹಿಂತಿರುಗಿ ಬಂದಿದ್ದೇನೆ. ಬೇರೆಯವರ ಮಸಾಲೆ ಹಾಕಿ ರುಬ್ಬಿದ ರಿಮೇಕ್ ಚಿತ್ರಗಳು, ಸ್ಟಾರ್ ಗಳ ಅಬ್ಬರದಲ್ಲಿ ಅಪರೂಪಕ್ಕೆಂಬತೆ ಬರುವ ಸದಭಿರುಚಿಯ ಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆ ಕಾಣುತ್ತದೆ. ಯಶಸ್ವಿ ನಾಲ್ಕನೇ ಬಾರಿಗೆ ನೋಡಿದ ಚಿತ್ರಗಳು ಅಂತಹ ವರ್ಗಕ್ಕೆ ಸೇರುತ್ತವೆ. ಯಡವಟ್ಟಾದರೆ ಸ್ಟಾರ್ ಚಿತ್ರಗಳೂ ಕೂಡ ವಾರದಲ್ಲಿ ಚಿತ್ರಮಂದಿರದಿಂದ ಚಿತ್ರಮಂದಿರಕ್ಕೆ ಓಡುತ್ತಿವೆ.

ಕೆಲವರ್ಷಗಳ ಹಿಂದೆ ನಾವು ಆರು ಗೆಳೆಯರು ಸೇರಿ “ಉಳಿದವರು ಕಂಡಂತೆ “ಚಿತ್ರ ವೀಕ್ಷಿಸಲು ಟಾಕೀಜಿಗೆ ಹೋದಾಗ ನಮಗೆ ಸಿಕ್ಕಿದ್ದು, ಸರ್ ಈ ಫಿಲ್ಮ್ ಅರ್ಥ ಆಗೋಲ್ಲಾ, ಆ ಸಿನಿಮಾಗೆ ಹೋಗಿ ಸರ್ ಅಂತ ಸ್ವತಃ ಚಿತ್ರಮಂದಿರದವರೇ ಸಲಹೆ ನೀಡಿದ್ದರು. ಕರ್ನಾಟಕದಲ್ಲಿ ಸಿನಿ ರಸಿಕರ ಮೆಚ್ಚುಗೆಯ ಮಾತುಗಳನ್ನು ಕೇಳಿದ್ದ, ಚಿತ್ರಕ್ಕೆ ಸಿಕ್ಕ ಬೆಲೆ ಇದು. ಇಷ್ಟಕ್ಕೆ ನಿಲ್ಲದ ನಮಗೆ ಎದುರಾದದ್ದು ದೇವರನಾಡಲ್ಲಿ ಎಂಬ ಚಿತ್ರ ನಮ್ಮೂರಿನಲ್ಲಿ ಒಂದುವಾರ ಕಾಲವೂ ಇರಲಿಲ್ಲ. ನೋಡಲು ನಾಲ್ಕೈದು ಬಾರಿ ಪ್ರಯತ್ನಿಸಿದರು ಸಿನಿಮಾ ನೋಡಲಾಗಲಿಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವು ಹೀಗೆ ಬಂದು ಹಾಗೆ ಹೋಗಿತ್ತು. ಇನ್ನು ನಮಗೆ ಪಿ.ಶೇಷಾದ್ರಿ, ಬರಗೂರ ರಾಮಚಂದ್ರಪ್ಪ, ಗಿರೀಶ ಕಾಸರವಳ್ಳಿ ಅವರ ಚಿತ್ರಗಳು ಹಗಲುವೇಷ, ಗುಲಾಬಿ ಟಾಕೀಸ್, ಭಾರತ್ ಸ್ಟೋರ್ಸ್, ಕನಸೆಂಬೋ ಕುದುರೆಯನೇರಿ, ದ್ವೀಪ, ನಾಯಿ ನೆರಳು, ಮುನ್ನುಡಿ, ಹೀಗೆ ಕಥೆಗಳು ಉತ್ತಮವಾಗಿದ್ದರೂ ಇಂತಹ ಚಲನಚಿತ್ರಗಳೆಲ್ಲ ಜನರನ್ನು ತಲುಪುತ್ತಿಲ್ಲ. ಕರ್ನಾಟಕದ ಉದ್ದಗಲಕ್ಕೂ ಇವುಗಳನ್ನು ನೋಡಲು ಬಯಸುವ ಪ್ರೇಕ್ಷಕರಿದ್ದರೂ ಅಂತಹ ಚಿತ್ರಗಳು ಜನರನ್ನು ತಲುಪುತ್ತಿಲ್ಲ.

ಇನ್ನೊಂದೆಡೆ ಸ್ಟಾರ್ ನಟರೆಲ್ಲಾ ರಿಮೇಕ್ ದಾಸರಾಗಿದ್ದಾರೆ. ತೆಲುಗಿನಲ್ಲಿ ಜ್ಯೂ ಎನ್.ಟಿ.ಆರ್ ಮಾಡಿದ್ದ ಬೃಂದಾವನಂ ಚಿತ್ರವನ್ನು ಕನ್ನಡದಲ್ಲಿ ನಟ ದರ್ಶನ್ ಮಾಡಿದರು. ಮಹೇಶಬಾಬು ನಟನೆಯ ಒಕ್ಕಡು ಚಿತ್ರ ಕನ್ನಡದಲ್ಲಿ ಪುನೀತರಾಜಕುಮಾರ ಅವರ ಅಭಿನಯದಲ್ಲಿ ’ಅಜಯ’ ಹೆಸರಿನಲ್ಲಿ ತೆರೆಗೆ ಬಂದಿತು. ತೆಲುಗಿನ ’ಮಿರ್ಚಿ ’ಕನ್ನಡದಲ್ಲಿ ’ಮಾಣಿಕ್ಯ’ ಶೀರ್ಷಿಕೆಯಲ್ಲಿ ಸುದೀಪ್ -ರವಿಚಂದ್ರನ್ ಅವರ ಕಾಂಬಿನೇಷನ್ನಿನಲ್ಲಿ ತೆರೆಕಂಡಿತು.
ಹಿಂದಿಯ ’ಓ ಮೈ ಗಾಡ್’ ಚಿತ್ರವನ್ನು ಕನ್ನಡದಲ್ಲಿ ನಟರಾದ ಉಪೇಂದ್ರ, ಸುದೀಪ ಅವರು ಮುಖ್ಯ ಭೂಮಿಕೆಯಲ್ಲಿ ಮರುನಿರ್ಮಾಣವಾಯಿತು. ಈ ರೀತಿ ಉದಾಹರಣೆ ಕೊಡುತ್ತಾ ಹೋದರೆ ಸಾಕಷ್ಟು ಚಿತ್ರಗಳು ಈ ಪಟ್ಟಿಗೆ ಸೇರುತ್ತವೆ. ಸ್ಟಾರ್ ಗಳಾದವರು ಅಭಿಮಾನಿಗಳಿಗೋಸ್ಕರ ಈ ತರಹದ ಚಿತ್ರ ಮಾಡಲಿ. ಆದರೆ ಕನಿಷ್ಟ ನಾಲ್ಕೈದು ಚಿತ್ರಗಳಾದ ಮೇಲಾದರೂ ಉತ್ತಮ ಕಥೆ ಅಥವಾ ಕಾದಂಬರಿ ಆಧಾರಿತ ಚಿತ್ರವೊಂದನ್ನು ಸ್ಟಾರ್ ನಟರು ಮಾಡಿದರೆ ಕನ್ನಡ ಸಾಹಿತ್ಯವು ಬೆಳ್ಳಿತೆರೆಮೇಲೆ ಕಾಣಿಸಿಕೊಳ್ಳುವುದು ಖಚಿತ.

ಇತ್ತೀಚೆಗೆ ತೆರೆಕಂಡು ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಪಡೆದ ಚಿತ್ರ, ಸ.ಹಿ.ಮಾ.ಪ್ರಾಥಮಿಕ ಶಾಲೆ ಕಾಸರಗೋಡು. ಈ ಚಿತ್ರವನ್ನು ನಾನು ನೋಡಲೇಬೇಕೆಂದು ಪ್ರಯತ್ನ ಪಟ್ಟಿದ್ದ ಯಶಸ್ಸಿನ ಫಲವಾಗಿ ನಾಲ್ಕನೇ ಬಾರಿಗೆ ಚಿತ್ರಮಂದಿರದಲ್ಲಿ ಕುಳಿತೆ. ನಿಜಕ್ಕೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಉತ್ತಮವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ವೈಶಿಷ್ಟ್ಯದಿಂದ ಕೂಡಿದೆ. ಉಪಾಧ್ಯಾಯ,ಆ ಶಾಲೆಯ ಮಕ್ಕಳು, ಶಿಕ್ಷಕರು, ಅನಂತನಾಗ್, ತಿಂಡಿಪೋತ(ಭುಜಂಗ) ಹೀಗೆ ಹತ್ತು ಹಲವು ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಅದರಲ್ಲೂ ಮಧ್ಯಂತರದ ನಂತರ ಬರುವ ಅನಂತನಾಗ್, ರಮೇಶ ಭಟ್, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿತು ನಿರ್ದೇಶಕರು ಅಬ್ಬಾ ಎಷ್ಟು ಚೆಂದ ಅಲ್ವಾ. ಮಧ್ಯಂತರದ ವರೆಗೂ ಶಾಲೆಯ ಮಕ್ಕಳು, ಉಪಾಧ್ಯ, ಮೇಷ್ಟ್ರು, ಪಣಿಕ್ಕರ್, ತಿಂಡಿಪೋತ, ಕುಡುಕ ಚಿತ್ರವನ್ನು ಆವರಿಸಿದರೆ. ನಂತರ ಬರುವ ಅನಂತನಾಗ್ ಇಡೀ ಚಿತ್ರವನ್ನು ಆವರಿಸಿಬಿಡುತ್ತಾರೆ. ಅಪರಾಧ ಶಾಸ್ತ್ರ ಪದವೀಧರನ ಪಾತ್ರದಲ್ಲಿ ಅನಂತನಾಗ ಬಹುಸೊಗಸಾಗಿ ಅಭಿನಯಿಸಿದ್ದಾರೆ. ಮಕ್ಕಳೊಂದಿಗೆ ಆಟವಾಡುತ್ತಲೇ ತನ್ನ ಕೆಲಸವನ್ನು ಮಾಡುವ, ಜಾಲಿ ಜಾಲಿಯಾಗಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣುವ ನಿರ್ದೇಶಕ ರಿಷಬ್ ಶೆಟ್ಟಿಯವರು ಒಂದೆರಡು ದೃಶ್ಯಗಳಲ್ಲಿ ಬಂದರೂ ಕೂಡ ನೆನಪಿನಲ್ಲಿ ಉಳಿಯುವಂತಾ ಪಾತ್ರ ಅವರದು. ನಿಜಕ್ಕೂ ಚಿತ್ರತಂಡಕ್ಕೊಂದು ಹ್ಯಾಟ್ಸಾಪ್.
ಉತ್ತಮ ಚಿತ್ರಗಳಿಗೆ ಕನ್ನಡಿಗರಷ್ಟೇ ಅಲ್ಲ ಸಹೃದಯ ಪ್ರೇಕ್ಷಕರೆಲ್ಲರೂ ತೆಲೆಬಾಗಿದ್ದಾರೆ, ತೆಲೆಬಾಗಿರುವ ಉದಾಹರಣೆಯು ಸಾಕಷ್ಟಿವೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವುದಿಲ್ಲ ಅನ್ನುವುದನ್ನು ಸುಳ್ಳಾಗಿಸಿದ ಮುಂಗಾರುಮಳೆ, ದುನಿಯಾ, ಜಾಕಿ, ಟಗರು, ಜನುಮದಜೋಡಿ, ಯಜಮಾನ, ಬಂಗಾರದ ಮನುಷ್ಯ, ಕಿರಿಕ್ ಪಾರ್ಟಿ,ತಮಸ್ಸು, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಅಮೇರಿಕಾ ಅಮೇರಿಕಾ, ಚಿಗುರಿದ ಕನಸು, ಎದೆಗಾರಿಕೆ, ತಮಸ್ಸು, ಕಳ್ಳರ ಸಂತೆ, ಹೀಗೆ ಹತ್ತು ಹಲವು ಉತ್ತಮ ಕಥಾ ಹಂದರವುಳ್ಳ ಚಿತ್ರಗಳು ಪ್ರೇಕ್ಷಕರನ್ನು ಮನರಂಜಿಸಿದ್ದು ಸುಳ್ಳಲ್ಲ. ಡಾ ರಾಜಕುಮಾರ , ಡಾ ವಿಷ್ಣುವರ್ಧನ ಅವರು ಉತ್ತಮ ಕಥೆ, ಕಾದಂಬರಿಗಳನ್ನು ತೆರೆಗೆ ತಂದಿದ್ದರು. ಈಗಲೂ ಅಲ್ಲೊಂದು ಇಲ್ಲೊಂದು ಕಾದಂಬರಿ ಆಧಾರಿತ ಚಿತ್ರಗಳು ಬರುತ್ತಿವೆ. ಶಿವರಾಮ ಕಾರಂತರ ಚಿಗುರಿದ ಕನಸು ಶಿವರಾಜಕುಮಾರ ನಟನೆಯಲ್ಲಿ ಬಂದಿತ್ತು. ನಿರ್ದೇಶಕಿ ಸುಮನಾ ಕಿತ್ತೂರ ಅವರ ನಿರ್ದೇಶನದಲ್ಲಿ ಮೂಡಿಬಂದ ಕಿರಗೂರಿನ ಗಯ್ಯಾಳಿಗಳು, ತಮಸ್ಸು, ಎದೆಗಾರಿಕೆ, ಕಾದಂಬರಿ ಆಧಾರಿತ ಚಿತ್ರಗಳು. ಈ ಹಿಂದೆ ಬಂದಿರುವ ಯಂಡಮೂರಿ ವಿರೇಂದ್ರನಾಥ ಅವರ ಗ್ರೀನ್ ಸಿಗ್ನಲ್. ಸಂತೆಯಲ್ಲಿ ನಿಂತ ಕಬೀರ. ಹೀಗೆ ಹಲವಾರು ಉತ್ತಮ ಚಿತ್ರಗಳು ರಂಜಿಸಿವೆ.
ಮತ್ತು ಇತ್ತೀಚೆಗಿನ ಸುದ್ದಿಯಂತೆ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ರಾಜೇಂದ್ರಸಿಂಗ ಬಾಬು ನಿರ್ದೇಶನದ ಮಾಡುತ್ತಿರುವ ಗಂಡುಗಲಿ ಮದಕರಿನಾಯಕ. ಖಾಸಗಿ ವಾಹಿನಿಯೊಂದರಲ್ಲಿ ನಟ ಅರ್ಜುನ ಸರ್ಜಾ ಅವರು ತ.ರಾ.ಸು ಅವರ ಬಹು ಜನಪ್ರಿಯ ಐತಿಹಾಸಿಕ ಕಾದಂಬರಿ ದುರ್ಗಾಸ್ತಮಾನ ತೆರೆಗೆ ತರುತ್ತೇನೆ ಎಂದಿರುವುದು. ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನದಲ್ಲಿ ಬರಲು ಸಜ್ಜಾಗಿರುವ ವೀರ ಸಿಂಧೂರ ಲಕ್ಷ್ಮಣ ಚಿತ್ರ ಕಿಶೋರ್ ನಾಯಕತ್ವದಲ್ಲಿ ಬರಲಿವೆ. ಈ ತರಹದ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹ.
ಈ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ಚಲನಚಿತ್ರೋತ್ಸವದಲ್ಲಿ ಉತ್ತಮ ಚಿತ್ರಗಳ ಪ್ರದರ್ಶನವಾಗುತ್ತಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಲಾತ್ಮಕ ಸದಭಿರುಚಿಯ ಚಿತ್ರಗಳನ್ನು ರಾಜ್ಯದ ಎಲ್ಲಾ ಜಿಲ್ಲೆಯ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಿ ಜನರಿಗೆ ತಲುಪಿಸುತ್ತಿದೆ. ಈ ಕೆಲಸವನ್ನು ಚಿತ್ರಗಳ ನಿರ್ದೇಶಕರು, ನಿರ್ಮಾಪಕರು,ನಟರು ಮಾಡಬೇಕು. ಕರ್ನಾಟಕದ ಉದ್ದಗಲಕ್ಕೂ ಇರುವ ಸಾಮಾನ್ಯ ಪ್ರೇಕ್ಷಕನಿಗೂ ಸಿನಿಮಾ ತಲುಪಬೇಕು. ಬೆಂಗಳೂರಿಗೆ ಅಷ್ಟೇ ಸಿಮೀತವಾಗದಿರಲಿ. ಪ್ರೇಕ್ಷಕರತ್ತ ಕನ್ನಡ ಚಿತ್ರ ಸಾಗುವಂತಾಗಲಿ.

ಒಂದೆಡೆ ಸದಭಿರುಚಿಯ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ಇನ್ನೊಂದೆಡೆ ಉತ್ತಮ ಚಿತ್ರಗಳು ಬರುತ್ತಿಲ್ಲ ಎನ್ನುವ ಕೂಗು ಸಿನಿ ರಸಿಕರದ್ದು. ಸ್ಟಾರ್ ಗಳಾದವರು ಈಗಲಾದರೂ ಸಾಹಿತ್ಯ ಅಧ್ಯಯನ ಮಾಡಿ ಪ್ರಭಾವಶಾಲಿಯಾದ ಚಿತ್ರಗಳಿಂದ ಸಾಹಿತ್ಯವನ್ನು ಬಳಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಲೇ ಕಾಪಾಡಿಕೊಳ್ಳಲಿ. ಇಲ್ಲದಿದ್ದರೆ ಪ್ರೇಕ್ಷಕರಿಲ್ಲ ಅಂತ ಪ್ರದರ್ಶನ ರದ್ದು ಮಾಡುತ್ತಿರುವದರಿಂದ ಇರುವ ಪ್ರೇಕ್ಷಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಸ್ಟಾರ್ ನಟರನ್ನು ಅನುಕರಿಸುವ ಅಭಿಮಾನಿಗಳಿದ್ದಾರೆ. ನಟರು ಉತ್ತಮವಾದುದನ್ನು ಕೊಡುವ ಶಕ್ತಿ ಹೊಂದಿದ್ದಾರೆ. ಚಲನಚಿತ್ರಗಳಲ್ಲಿ ಸಾಹಿತ್ಯ ಬಳಸಿಕೊಂಡು ಬೆಳ್ಳಿತೆರೆಯಲ್ಲಿ ರಾರಾಜಿಸಲಿ ಎನ್ನುವುದು ಕನ್ನಡಿಗರ ಆಶಯವಾಗಿದೆ.

-ನಾಗರಾಜನಾಯಕ ಡಿ.ಡೊಳ್ಳಿನ
ಕೊಪ್ಪಳ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button