ಪ್ರಗತಿವಾಹಿನಿ ಸುದ್ದಿ, ವಿಜಯಪುರ:
ವಿಜಯಪುರದ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಅವರ ಮೃತದೇಹ ಕೊಲ್ಹಾರದ ಕೃಷ್ಣಾನದಿ ಸೇತುವೆಯೊಂದರ ಕೆಳಗೆ ಶುಕ್ರವಾರ ಪತ್ತೆಯಾಗಿದೆ. ದುಷ್ಕರ್ಮಿಗಳು ಅವರನ್ನು ಕೊಲೆಗೈದಿದ್ದು, ಕಾರಣ ಇನ್ನೂ ನಿಗೂಢವಾಗಿದೆ.
ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿದ್ದ ರೇಷ್ಮಾ ಕಳೆದ ವರ್ಷ ಕಾಂಗ್ರೆಸ್ ಸೇರಿದ್ದರು. ರೇಷ್ಮಾ ಪಡೇಕನೂರ, 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ 2018ರ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಅವರು ಜೆಡಿಎಸ್ ತೊರೆದಿದ್ದರು. ಗೃಹ ಸಚಿವ ಎಂ.ಬಿ. ಪಾಟೀಲ್, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ನಂತರದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದ ಎಂಐಎಂ ಮುಖಂಡರೊಬ್ಬರೊಂದಿಗೆ ರೇಷ್ಮಾ ವ್ಯವಹಾರಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಅದು ಅನೈತಿಕ ವ್ಯವಹಾರಕ್ಕೂ ತಿರುಗಿರುವ ಶಂಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಎಂಐಎಂ ಮುಖಂಡನ ಹೆಂಡತಿ ರೇಷ್ಮಾ ಅವರ ಮನೆ ಬಳಿ ರಂಪಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರೇಷ್ಮಾ ಕೊಲೆ ನಡೆದಿರಬಹುದು ಎನ್ನುವ ದಟ್ಟ ವದಂತಿ ಹರಡಿದೆ. ಆ ಮುಖಂಡನ ಜೊತೆ ರೇಷ್ಮಾ ಅವರು ಗುರುವಾರ ಕಾರಿನಲ್ಲಿ ತೆರಳಿದ್ದರು ಎಂದು ಹೇಳಲಾಗಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ರೇಷ್ಮಾ ಅವರ ಶವ ಕಂಡುಬಂದಿದೆ. ದುಷ್ಕರ್ಮಿಗಳು ಗುರುವಾರ ರಾತ್ರಿ ಅವರನ್ನು ಕೊಲೆ ಮಾಡಿ, ಶವವನ್ನು ಸೇತುವೆಯ ಕೆಳಗೆ ಎಸೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತಂತೆ ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ