Latest

ಸುಪ್ರಿಂ ಮುಖ್ಯ ನ್ಯಾಯಾಧೀಶರ ವಿರುದ್ದವೇ ಲೈಂಗಿಕ ಕಿರುಕುಳ ಆರೋಪ

ಪ್ರಗತಿವಾಹಿನಿ ಸುದ್ದಿ, ನವದೆಹಲಿ:

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ವಿರುದ್ಧ ಸುಪ್ರಿಂ ಕೋರ್ಟ್ ಮಾಜಿ ಉದ್ಯೋಗಿಯೊಬ್ಬಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾಳೆ.

Related Articles

ಈ ಸಂಬಂಧ ಸುಪ್ರಿಂ ಕೋರ್ಟ್ನ ಎಲ್ಲ ನ್ಯಾಯಮೂರ್ತಿಗಳಿಗೆ ಅಫಿಡವಿಟ್ ಸಲ್ಲಿಸಿರುವ ಮಹಿಳೆ, ತಾನು ಸಹಕಾರ ನೀಡದ್ದರಿಂದ ತನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು. ನಂತರ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ತನ್ ಪತಿ ಹಾಗೂ ಮೈದುನನನ್ನು ಸಹ ಕೆಲಸದಿಂದ ವಜಾ ಮಾಡಲಾಯಿತು. ತನ್ನ ಮೇಲೆ ಲಂಚದ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಆರೋಪಿಸಿದ್ದಾಳೆ.

 ಆದರೆ ಈ ಆರೋಪದಿಂದ ತೀವ್ರ ಆಘಾತಗೊಂಡಿರುವ  ರಂಜನ್ ಗೊಗೊಯ್, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.

Home add -Advt

ಈ ಪ್ರಕರಣದ ಕುರಿತಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಗೊಗೊಯ್, ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸೂಕ್ತ ಅಲ್ಲ ಎಂದು ತಿಳಿಸಿದ್ದಾರೆ.

‘ ಸುಪ್ರೀಂಕೋರ್ಟ್‌ನಲ್ಲಿ 2014ರ ಮೇ 1ರಿಂದ 2018ರ ಡಿಸೆಂಬರ್ 21ರವರೆಗೂ ಕಿರಿಯ ನ್ಯಾಯಾಲಯ ಸಹಾಯಕಿಯಾಗಿ ನಾನು ಕೆಲಸ ಮಾಡಿದ್ದೇನೆ. ನನ್ನನ್ನು ಸೇವೆಯಿಂದ ಏಕಾಏಕಿ ತೆಗೆದುಹಾಕಲಾಯಿತು.  ಅದೇ ತಿಂಗಳು ದೆಹಲಿ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಕಾನ್‌ಸ್ಟೆಬಲ್‌ಗಳಾಗಿರುವ ನನ್ನ ಪತಿ ಮತ್ತು ಅವರ ಸಹೋದರರನ್ನು ಕೂಡ ಅಮಾನತು ಮಾಡಲಾಗಿದೆ. ನನ್ನ ಪತಿಯ ಕಿರಿಯ ಸಹೋದರನಿಗೆ ಮುಖ್ಯ ನ್ಯಾಯಮೂರ್ತಿಗಳ ವಿವೇಚನೆಯ ಕೋಟಾದಡಿ ಅಕ್ಟೋಬರ್‌ನಲ್ಲಿ ಗ್ರೂಪ್ ಡಿ ನೌಕರಿ ಕೊಡಿಸಲಾಗಿತ್ತು. ಅವರನ್ನು ಕೂಡ ಯಾವುದೇ ಕಾರಣ ನೀಡದೆ 2019ರ ಜನವರಿಯಲ್ಲಿ ಕಿತ್ತುಹಾಕಲಾಗಿದೆ.

ಎಫ್‌ಐಆರ್ ದಾಖಲು, ಬಂಧನ ಇದಲ್ಲದೆ, 2019ರ ಮಾರ್ಚ್ 3ರಂದು ನನ್ನ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ. 2017ರಲ್ಲಿ ಕೆಲಸ ಕೊಡಿಸುವುದಾಗಿ ಸುಪ್ರೀಂಕೋರ್ಟ್ ಆವರಣದಲ್ಲಿಯೇ ಝಜ್ಜರ್ ಮೂಲದ ನವೀನ್ ಎಂಬುವವರಿಂದ 50,000 ರೂಪಾಯಿ ಮುಂಗಡ ಪಡೆದುಕೊಂಡಿದ್ದೇನೆ ಎಂದು ಆರೋಪಿಸಲಾಗಿತ್ತು. ಇದರ ಆಧಾರದಲ್ಲಿ ನನ್ನನ್ನು ಆ ರಾತ್ರಿ ಬಂಧಿಸಲಾಗಿತ್ತು. ನನ್ನ ಕಾಲುಗಳಿಗೆ ಸಂಕೋಲೆ ಹಾಕಲಾಗಿತ್ತು. ನನ್ನ ಗಂಡನನ್ನು  ಪೊಲೀಸ್ ಕಸ್ಟಡಿಯಲ್ಲಿ ಥಳಿಸಿ ಕೈಕೋಳ ಹಾಕಲಾಗಿತ್ತು. ನನ್ನನ್ನು ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಂಗ ಕಸ್ಟಡಿಯಲ್ಲಿ ತಲಾ ಒಂದು ದಿನ ಇರಿಸಲಾಗಿತ್ತು.  

ನನ್ನ ಅಧೀನದಲ್ಲಿದ್ದ ದಾಖಲೆಗಳ ಸಹಿತ ಇಡೀ ಘಟನಾವಳಿಗಳನ್ನು  ಅಫಿಡವಿಟ್‌ನಲ್ಲಿ ವಿವರಿಸಿದ್ದೇನೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಅವರ ಲೈಂಗಿಕ ಬೇಡಿಕೆಗಳಿಗೆ ಒಪ್ಪದ ಕಾರಣಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಸನ್ನಿವೇಶದ ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿರುವ ಸತ್ಯಾಂಶದಲ್ಲಿ ನೀವು ನೋಡಬಹುದು. ನನಗೆ ಮತ್ತು ನನ್ನ ಕುಟುಂಬಕ್ಕೆ ಆಗಬಹುದಾದ ಪರಿಣಾಮಗಳ ಕುರಿತಾದ ಭಯದಿಂದ, ಬೆದರಿಕೆಗಳಿದ್ದ ಕಾರಣದಿಂದ ಇದಕ್ಕೂ ಮೊದಲು ದೂರು ಸಲ್ಲಿಸಲು ಧೈರ್ಯ ಬಂದಿರಲಿಲ್ಲ. ಆದರೆ, ನಾನು ಮತ್ತು ನನ್ನ ಕುಟುಂಬ ಎದುರಿಸಿದ ಸಂಕಷ್ಟಗಳ ಕುರಿತು ಹಿಂದೆಂದೂ ಕೇಳಿರದಂತೆ ಮತ್ತು ನಿರಂತರ ಬಲಿಪಶುವನ್ನಾಗಿ ಮಾಡಿರುವುದನ್ನು ನೀವೇ ನೋಡಬಹುದು. ಈ ಸಂಗತಿಯನ್ನು ನಿಮ್ಮ ಗಮನಕ್ಕೆ ತರುವಂತೆ ಮನವಿ ಸಲ್ಲಿಸದ ಹೊರತಾಗಿ ನನಗೆ ಬೇರೆ ದಾರಿ ಇರಲಿಲ್ಲ.

ಈ ಪತ್ರದ ಮೂಲಕ ನಾನು ಸುಪ್ರೀಂಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಈ ಲೈಂಗಿಕ ಕಿರುಕುಳ ಹಾಗೂ ಪರಿಸ್ಥಿತಿಯ ಬಲಿಪಶುವನ್ನಾಗಿಸಿರುವ ಈ ಆರೋಪಗಳ ಕುರಿತು ವಿಚಾರಣೆ ನಡೆಸಲು ಹಿರಿಯ ನಿವೃತ್ತ ನ್ಯಾಯಮೂರ್ತಿಗಳ ವಿಶೇಷ ವಿಚಾರಣಾ ಸಮಿತಿಯನ್ನು ಸ್ಥಾಪಿಸುವಂತೆ ಕೋರುತ್ತೇನೆ’ ಎಂದು ಆಕೆ ಆರೋಪಿಸಿದ್ದಾಳೆ.

Related Articles

Back to top button