ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆಯ ಪರಿಕಲ್ಪನೆ ಬೆಳೆಸಿಕೊಳ್ಳಬೇಕು. ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಿಕೊಳ್ಳಬೇಕೆಂದು ಉತ್ತರ ವಲಯದ ಶಾಸಕ ಅನಿಲ ಬೆನಕೆ ಹೇಳಿದರು.
ಕೇಂದ್ರ ಸರ್ಕಾರದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಬೆಳಗಾವಿ ಮಹಾನಗರ ಪಾಲಿಕೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಜೀವನ ಡೆವಲಪ್ಮೆಂಟಲ್ ಸೊಸಾಯಿಟಿ ಮತ್ತು ಯಶಸ್ವಿನಿ ಮಹಿಳಾ ಮಂಡಳ ಇವರ ಆಶ್ರಯದಲ್ಲಿ ಗುರುವಾರ ಬೆಳಗಾವಿ ಕಣಬರಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ’ಸ್ವಚ್ಛ ಭಾರತ ಮಿಷನ್’ ಕುರಿತು ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಹಾಗೂ ಸಾರ್ವಜನಿಕರು ಕಸಕಡ್ಡಿಗಳನ್ನು ಎಲ್ಲೆಂದರೆ ಅಲ್ಲಿ ಬೀಸಾಕದೆ, ನಿಗದಿತ ಸ್ಥಳದಲ್ಲಿ ಕೂಡಿಡುವ ಪ್ರವೃತ್ತಿ ರೂಢಿಸಿಕೊಂಡಾಗ ರೋಗಮುಕ್ತವಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪಾಲಿಕೆ ಸದಸ್ಯ ಭೈರಗೌಡ ಪಾಟೀಲ, ಕಣಬರಗಿಯಲ್ಲಿ ಶೇ.೯೦ ರಷ್ಟು ಜನರು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು ಅತಿ ಶೀಘ್ರದಲ್ಲಿ ಬಯಲು ಬಹಿರ್ದೆಸೆ ಮುಕ್ತ ಮಾಡಲಾಗುವುದೆಂದು ಹೇಳಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಉದಯಕುಮಾರ ಎಮ್ ಕದಮ್ ಅವರು ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಮತ್ತು ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಯನ್ನು ತೊರಿಸಿಕೊಟ್ಟರು.
ಬೆಂಗಳೂರು ಪ್ರ್ರಾದೇಶಿಕ ಜನಸಂಪರ್ಕ ಕಾರ್ಯಾಲಯ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನಿರ್ದೇಶಕರಾದ ನತಾಶ ಎಸ್ ಡಿಸೋಜಾ ಅವರು ಸ್ವಚ್ಚತಾ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಾಗೃತಿ ಜಾಥಾ, ಶ್ರಮದಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಫ್.ಬಿ. ನದಾಫ, ಧಾರವಾಡ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಪ್ರಚಾರಾಧಿಕಾರಿ ಜಿ. ತುಕಾರಾಮಗೌಡ, ಪಾಲಿಕೆಯ ಪರಿಸರ ಅಭಿಯಂತರ ಪವೀಣ್ ಖಿಲಾರೆ, ಡಾ. ವಿರೇಶ ಪಂಚಾಕ್ಷರಿಮಠ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ