ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಿಂದಿನ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮತದಾನ ಮಾಡಿದ್ದಾರೆ. ಅದೇ ರೀತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.
ಬುಧವಾರ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಬೆಳಗಾವಿಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಅರ್ಹ ವ್ಯಕ್ತಿಯು ಮತದಾನ ಹಕ್ಕಿನಿಂದ ವಂಚಿತರಾಗದೆ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿದ್ದರೆ ಈಗಲೂ ಅವಕಾಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಶೇಕಡಾ ೩೦ ರಷ್ಟು ಯುವಕರು ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಯಾಗಬೇಕು. ನಿಮ್ಮ ಮನೆಯವರಿಗೆ ಹಾಗೂ ಮನೆಯ ಸುತ್ತಮುತ್ತಲಿನವರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಎಲ್ಲರೂ ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.
ಯಶೋಧಾ ಒಂಟಗೋಡಿ ಮಾತನಾಡಿ, ಮಹಿಳೆಯರು ಮತ್ತು ಪುರುಷರು ಎನ್ನುವ ಕೀಳರಿಮೆಯನ್ನು ಮನೆಯಿಂದಲೇ ಕಿತ್ತುಹಾಕಬೇಕು ಮತ್ತು ತಾಯಿಯಾದವಳು ಹೆಣ್ಣು ಮಕ್ಕಳಿಗೆ ಮಾತ್ರ ಕೆಲಸ ಹೇಳುವ ಬದಲು ಗಂಡು ಮಕ್ಕಳಿಗೂ ಮನೆಗೆಲಸ ಮಾಡಲು ತಿಳಿಸಬೇಕು ಎಂದು ಸಲಹೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಮಹಿಳೆಯರು ನಿರ್ಭೀತರಾಗಿ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಮತ್ತು ಯಾವುದೇ ಪ್ರೇರಣೆ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕೆಂದು ಕರೆ ನೀಡಿದರು.
ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆ ಸನ್ಮಾನ ಮಾಡಲಾಯಿತು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ಸುಚೇತನಾ ಕುಲಕರ್ಣಿ ನಿರೂಪಿಸಿದರು. ಶಿಲ್ಪಾ ಗುತ್ತಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ನೀರಗಟ್ಟಿ ಸ್ವಾಗತಿಸಿದರು. ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ ಪತ್ತಾರ ವಂದಿಸಿದರು.
ಪ್ರಭಾರಿ ಐಎಎಸ್ ಅಧಿಕಾರಿ ಭವರಸಿಂಗ್ ಮೀನಾ,ಶ್ರೀಮತಿ ಗುನ್ನಗೋಳ, ಜ್ಯೋತಿ ಇಂಡಿ, ಸುರೇಖಾ ಹಿರೇಮಠ, ಪದ್ಮಜಾ, ಪ್ರಭಾವತಿ ಪತ್ತಾರ ಹಾಗೂ ಮತ್ತಿತರ ಮಹಿಳಾ ಕಾರ್ಯದರ್ಶಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮೆರವಣಿಗೆ : ನಗರದ ಚನ್ನಮ್ಮ ವೃತ್ತದಿಂದ ಕೋರ್ಟ್ ಮಾರ್ಗವಾಗಿ ಕುಮಾರ ಗಂಧರ್ವ ಕಲಾಮಂದಿರದವರೆಗೆ ಮಾನವ ಸರಪಳಿ ಮೂಲಕ ತಲುಪಿದ ಭವ್ಯ ಮೆರವಣಿಗೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ, ಡಿಸಿಪಿ ಸೀಮಾ ಲಾಟ್ಕರ್, ಡಿಸಿಪಿ ಯಶೋಧಾ ಒಂಟಗೋಡಿ ಚಾಲನೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ