*ಎರಡು ಕಾರು, ಬೈಕ್ ಗಳಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ; ಸಿನಿಮೀಯ ರೀತಿಯಲ್ಲಿ ಸೀಜ್*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ನಡೆಯದಂತೆ ಪೊಲೀಸರು ಹಾಗೂ ಚುನಾವಣಾ ಅಧಿಕರಿಗಳು ಕಟೆಚ್ಚರ ವಹಿಸಿದ್ದಾರೆ. ಈ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ಕಾರು, ಒಂದು ಬೈಕ್ ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಹಣ ಎಣಿಸಲಾಗದೇ ಐಟಿ ಅಧಿಕಾರಿಗಳು ನೋಟು ಎಣಿಸುವ ಯಂತ್ರ ತೆಗೆದುಕೊಂಡು ಬಂದಿರುವ ಘಟನೆ ನಡೆದಿದೆ.
ಬೆಂಗಳೂರಿನ ಜಯನಗರ 4ನೇ ಬ್ಲಾಕ್ ನ ಮಯಾಸ್ ಹೋಟೆಲ್ ಎದುರು ನಿಂತಿದ್ದ ಎರಡು ಐಷಾರಾಮಿ ಕಾರು ಹಾಗೂ ಒಂದು ಸ್ಕೂಟರ್ ನಲ್ಲಿ ಚೀಲ ಹಾಗೂ ಬ್ಯಾಗ್ ಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಕಾರುಗಳ ಗಾಜು ಒಡೆದು ಕಾರಿನಲ್ಲಿದ್ದ ಚೀಲ, ಬ್ಯಾಗ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಕಾರಿನ ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಲ್ಲಿ ಇದ್ದ ಬ್ಯಾಗ್ ಒಂದರಲ್ಲಿಯೂ ಹಣ ಪತ್ತೆಯಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಮಾವಿನ ಹಣ್ಣಿನ ಬ್ಯಾಗ್ ಎಂದಿದ್ದಾರೆ.
ಪೊಲೀಸರನ್ನು ನೋಡುತ್ತಿದ್ದಂತೆ ಕಾರಿನಲ್ಲಿದ್ದ ಐವರು ಎಸ್ಕೇಪ್ ಆಗಿದ್ದಾರೆ. ಕಾರಿನಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ. ಒಂದು ಕಾರು ನಿನ್ನೆಯಷ್ಟೇ ಖರೀದಿಸಲಾಗಿತ್ತು ಎನ್ನಲಾಗಿದೆ.
ಎರಡು ಕಾರು, ಒಂದು ಬೈಕ್, ಕಂತೆ ಕಂತೆ ಹಣ ಜಪ್ತಿ ಮಾಡಿರುವ ಜಯನಗರ ಠಾಣೆ ಪೊಲೀಸರು ಐಟಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಣ ಎಣಿಸಲು ಐಟಿ ಅಧಿಕರಿಗಳು ಮಷಿನ್ ತೆಗೆದುಕೊಂಡು ಬಂದಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ಮನೀಶ್ ಮೌದ್ಗಿಲ್, ಇಂದು ಬೆಳಿಗ್ಗೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಬಗ್ಗೆ ಒಂದು ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಹೋಗಿ ಅಧಿಕಾರಿಗಳು ಪರಿಶೀಲಿಸಿದಾಗ ಬೈಕ್ ನಿಂದ ಕಾರುಗಳಿಗೆ ಹಣ ಶಿಫ್ಟ್ ಮಾಡಲಾಗುತ್ತಿತ್ತು. ಒಂದು ಬ್ಯಾಗ್ ವಶಕ್ಕೆ ಪಡೆದ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಯಾವುದೇ ಸ್ಪಷ್ಟನೇ ನೀಡದೇ ಹಣ್ಣಿನ ಬ್ಯಾಗ್ ಎಂದು ಹೇಳಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದಿದ್ದಂತೆ ಕಾರಿನಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ಸುಮಾರು ಒಂದು ಕೋಟಿಯಷ್ಟು ಹಣವಿರುವ ಸಾಧ್ಯತೆ ಇದ್ದು, ವಶಕ್ಕೆ ಪಡೆದು ಹಣ ಎಣಿಸಲಾಗುತ್ತಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ