Kannada NewsKarnataka NewsLatest

ಕೊಯ್ನಾ ವ್ಯಾಪ್ತಿಯಲ್ಲಿ ಲಘು ಭೂಕಂಪನ ; ಕೃಷ್ಣೆ ತೀರದಲ್ಲಿ ಹೈ ಅಲರ್ಟ್

10 ಸೇತುವೆಗಳು ಜಲಾವೃತ; ಕೃಷ್ಣೆ ತೀರದಲ್ಲಿ ಹೈ ಅಲರ್ಟ್

ಕೊಯ್ನಾ ಜಲಾಶಯ (ಗೂಗಲ್ ಚಿತ್ರ)
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –
ಮಹಾರಾಷ್ಟ್ರ ದಕ್ಷಿಣ ಭಾಗದಲ್ಲಿ ಮಳೆ ಮುಂದುವರಿದಿದ್ದು, ಬೆಳಗಾವಿ ಗಡಿ ಭಾಗದಲ್ಲಿ ಆತಂಕ ಹೆಚ್ಚಾಗಿದೆ.
ಕಳೆದ ರಾತ್ರಿಯಿಡೀ ಬೆಳಗಾವಿ ಜಿಲ್ಲೆಯ ಹಲವೆಡೆ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಸುರಿದಿದೆ. ಕೃಷ್ಣಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
 ಚಿಕ್ಕೋಡಿ ವ್ಯಾಪ್ತಿಯ 10 ಸೇತುವೆಗಳು ಈಗಾಗಲೆ ಜಲಾವೃತವಾಗಿವೆ. ಕೃಷ್ಣಾ ನದಿಗೆ 1 ಲಕ್ಷ 90 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದ್ದು ನದಿ ದಡದ ಭಾಗದಲ್ಲಿನ ಜನರಿಗೆ ಜಿಲ್ಲಾಡಳಿತ  ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಎಚ್ಚರಿಕೆ ನೀಡುವುದರ‌ ಜೊತೆಗೆ ಸೇತುವೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
 ಚಿಕ್ಕೋಡಿ  ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆ ಆದರೂ ಪ್ರವಾಹದ ಸ್ಥಿತಿ ಎದುರಿಸಬೇಕಾಗಿದೆ.  ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆಯ ಪ್ರಮಾಣದಿಂದ  ಚಿಕ್ಕೋಡಿ, ರಾಯಬಾಗ, ಅಥಣಿ ಭಾಗದಲ್ಲಿ ಪ್ರವಾಹ ಎದುರಾಗಿದೆ. ಈ ಪ್ರವಾಹದಿಂದ ಚಿಕ್ಕೋಡಿ ತಾಲೂಕಿನ 8 ಸೇತುವೆಗಳು ಹಾಗೂ ರಾಯಬಾಗ ತಾಲೂಕಿನ 2 ಒಟ್ಟು 10 ಸೇತುವೆಗಳು ಜಲಾವೃತವಾಗಿವೆ. ಇದರಿಂದ ಸಾರ್ವಜನಿಕರು 15 ರಿಂದ 20 ಕಿ.ಮೀ ಸುತ್ತುವರಿದು ಸಂಚರಿಸುತ್ತಿದ್ದಾರೆ. ಸದ್ಯ ಕೃಷ್ಣಾ‌ನದಿಯಲ್ಲಿ 1.90 ಲಕ್ಷ ಕ್ಯೂಸೆಕ್ಸ ನೀರು ಹರಿದು ಬರುತ್ತಿದ್ದು,  ಇನ್ನೂ  ಹೆಚ್ಚುವ ಸಾಧ್ಯತೆ ಇದೆ.

ಹೆಚ್ಚುವ ಆತಂಕ

ಮಹಾರಾಷ್ಟ್ರ ಭಾಗದಲ್ಲಿ ಮಳೆಯ ಪ್ರಮಾಣ ಇನ್ನೂ ಹೆಚ್ಚುವ ನಿರೀಕ್ಷೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡುವ ಆತಂಕವಿದೆ. ನೀರಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಜಿಲ್ಲಾಡಳಿತ ಕೃಷ್ಣಾ ನದಿ ದಡದಲ್ಲಿ ಕಟ್ಟೆಚ್ಚರ ವಹಿಸಿದೆ. ಹೈ ಅಲರ್ಟ್ ಘೋಷಿಸಿದ್ದು, ನದಿಯೊಳಗೆ ಇಳಿಯದಂತೆ  ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ತೋಟದ ಸುಮಾರು 8 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ರಾತೋರಾತ್ರೀ ನೀರು ಏರಿಕೆಯಾಗಿದ್ದರಿಂದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ನಡುಗಡ್ಡೆಯಲ್ಲಿವೆ.

ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಎಸ್.ಡಿ.ಆರ್.ಎಫ್ ತಂಡ, ಸೇರಿದಂತೆ ಅಧಿಕಾರಿಗಳು ಇಂಗಳಿ ಗ್ರಾಮಕ್ಕೆ ಭೇಟಿ ನೀಡಿ ಆ ತೋಟಪಟ್ಟಿ ವಸತಿ ಕುಟುಂಬಗಳ ಸ್ಥಳಾಂತರಕ್ಕೆ ಮನೆ‌ಮನೆಗೆ ಹೋಗಿ ಮನವಿ‌ ಮಾಡುತ್ತಿದ್ದಾರೆ.
 ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚಿಗೆ ನೀರು ಹೊರ ಬಿಡುತ್ತಿದ್ದು ಕೃಷ್ಣಾ ನದಿ‌ ಪ್ರವಾಹ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹಿಪ್ಪರಗಿ ಜಲಾಶಯದಿಂದ ನೀರು ನಿರಂತರವಾಗಿ ಹೊರ ಬಿಡುತ್ತಿರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಲಘು ಭೂಕಂಪನ

ಈ ಮಧ್ಯೆ ಮಹಾರಾಷ್ಟ್ರ ಗಡಿಯಲ್ಲಿರುವ ಕೊಯ್ನಾ ಜಲಾಶಯ ಪ್ರದೇಶದಲ್ಲಿ ರಾತ್ರಿ ಲಘುಭೂಕಂಪ ಉಂಟಾಗಿರುವ ಸುದ್ದಿ ಹೊರಬಂದಿದ್ದು, ಆತಂಕವನ್ನು ಹೆಚ್ಚಿಸಿದೆ. ಜಲಾಶಯದಿಂದ 20 ಕಿಮೀ ಅಂತರದಲ್ಲಿ 3.9ರಷ್ಟು ಭೂಕಂಪನ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ.
ಈ ಭಾಗದಲ್ಲಿ ಕಳೆದ 6 ತಿಂಗಳಲ್ಲಿ ಹಲವು ಬಾರಿ ಲಘುಭೂಕಂಪವಾಗಿದೆ. ಈಗ ಆಗಿರುವ ಭೂಕಂಪ ಸಣ್ಣ ಪ್ರಮಾಣದಲ್ಲಿದ್ದರೂ ಆತಂಕವಂತೂ ದೊಡ್ಡ ಪ್ರಮಾಣದಲ್ಲಿದೆ. ಕೊಯ್ನಾ ಜಲಾಶಯಕ್ಕೆ ಅಪಾಯವಾದರೆ ಅದರ ಕೆಳಭಾಗದಲ್ಲಿರುವ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ಭಾಗದಲ್ಲಿ ತೀವ್ರ ಆತಂಕ ಉಂಟಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button